

ಬೆಂಗಳೂರು: ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಶಶಿಕುಮಾರ್ ಅವರ ಮಗ ಅಕ್ಷಿತ್ ಇಷ್ಟರಲ್ಲಿ ಹೀರೋ ಆಗಿ ಎಂಟ್ರಿ ಕೊಡಬೇಕಿತ್ತು. ಈಗಾಗಲೇ ಎರಡು ವರ್ಷಗಳ ಹಿಂದೆಯೇ, ಅಕ್ಷಿತ್ ಅಭಿನಯದ 'ಮೊಡವೆ' ಎಂಬ ಚಿತ್ರ ಸೆಟ್ಟೇರಿತ್ತು. ಚಿತ್ರದ ಮುಹೂರ್ತವಾಗಿ ಚಿತ್ರೀಕರಣ ಪ್ರಾರಂಭವಾದರೂ, ಕಾರಣಾಂತರಗಳಿಂದ ಚಿತ್ರ ಬಿಡುಗಡೆಯಾಗಲಿಲ್ಲ.
ಈಗ ಅಕ್ಷಿತ್, 'ಸೀತಾಯಣ' ಎಂಬ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಒಂದು ಹಾಡನ್ನು ನಟ-ನಿರ್ದೇಶಕ ಉಪೇಂದ್ರ ಅವರು ಬಿಡುಗಡೆ ಮಾಡುವುದರ ಜತೆಗೆ, ಅಕ್ಷಿತ್ ಮತ್ತು ಚಿತ್ರತಂಡಕ್ಕೆ ಶುಭ ಹಾರೈಸಿ ಕಳುಹಿಸಿದ್ದಾರೆ.
ಮದುವೆಯ ಶುಭಸಂದರ್ಭದಲ್ಲಿ ರಾಮಾಯಣದಲ್ಲಿ ಬರುವ ಶ್ಲೋಕವನ್ನು ಬದಲು ಮಾಡಿ ಅದನ್ನೇ ಚಿತ್ರಕ್ಕಾಗಿ ಹಾಡಾಗಿಸಲಾಗಿದೆ. 'ಶ್ರೀರಾಮ ಪತ್ನಿ, ಜನಕಸ್ಯ ಪುತ್ರಿ, ಸೀತಾಂಗನ ಸುಂದರ ಕೋಮಲಾಂಗಿ ...' ಎಂದು ಸಾಗುವ ಈ ಹಾಡನ್ನು ನಯನ ನಾಯರ್ ಹಾಡಿದ್ದಾರೆ.
'ಸೀತಾಯಣ' ಚಿತ್ರವನ್ನು ಪ್ರಭಾಕರ್ ಆರಿಪ್ಕಾ ರಚಿಸಿ-ನಿರ್ದೇಶಿಸಿರುವ ಈ ಚಿತ್ರದಲ್ಲಿ ಮುಂಬೈ ಹುಡುಗಿ ಅನಹಿತಾ ಭೂಷಣ್ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಚಿತ್ರದಲ್ಲಿ ವಿಕ್ರಂ ಶರ್ಮ, ಶರ್ಮಿತಾ ಗೌಡ, ಮಧುಸೂದನ್, ಮೇಘನಾ ಗೌಡ, ಅಜಯ್ ಘೋಷ್, ಹಿತೇಶ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಪದ್ಮನಾಭ್ ಭಾರದ್ವಾಜ್ ಸಂಗೀತ ಸಂಯೋಜಿಸಿದ್ದಾರೆ.
ಈಗಾಗಲೇ, ಬೆಂಗಳೂರು, ಮಂಗಳೂರು, ಆಗುಂಬೆ, ವೈಜಾಗ್, ಹೈದರಾಬಾದ್, ಬ್ಯಾಂಕಾಕ್ ಮುಂತಾದ ಕಡೆ 63 ದಿವಸ ಚಿತ್ರೀಕರಣ ನಡೆದಿದೆ. ಕನ್ನಡವಲ್ಲದೆ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ಲಲಿತಾ ರಾಜಲಕ್ಷ್ಮೀ ಕಲರ್ಸ್ ಕ್ಲೌಡ್ಸ್ ಎಂಟರ್‌ಟೈನ್‌ಮೆಂಟ್ ಮೂಲಕ ನಿರ್ಮಾಣ ಮಾಡಿದ್ದಾರೆ.