

ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ಸಿಂಗ್ ತಂದೆ ಕೆಕೆ ಸಿಂಗ್ ಪಾಟ್ನಾ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಿದ್ದಂತೆ. ಒಂದಷ್ಟು ಆಘಾತಕಾರಿ ಬೆಳವಣಿಗೆಗಳು ನಡೆದಿದ್ದು, ರಿಯಾ, ಸುಶಾಂತ್ ಬಗ್ಗೆ ಮಾತನಾಡಿದ ವಿಡಿಯೋ ಸಹ ಇದೀಗ ಸುದ್ದಿಯಲ್ಲಿದೆ. ಸೋಷಿಯಲ್ ಮೀಡಿಯಾದಲ್ಲಿ ರಿಯಾ ಅವರನ್ನು ಬಂಧಿಸುವಂತೆ ಒತ್ತಾಯ ಹೇರಲಾಗುತ್ತಿದೆ. ಇದೆಲ್ಲದರಿಂದ ಬೇಸತ್ತ ರಿಯಾ ಇದೀಗ ವಿಡಿಯೋ ಮೂಲಕ ಎಲ್ಲರೆದು ಬಂದಿದ್ದಾರೆ. ಕಣ್ಣೀರು ಹಾಕುತ್ತಲೇ ಮಾತನಾಡಿದ್ದಾರೆ.
‘ನನಗೆ ದೇವರು ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣವಾದ ನಂಬಿಕೆ ಇದೆ. ನನ್ನ ವಿರುದ್ಧ ಮಾಧ್ಯಮಗಳಲ್ಲಿ ತುಂಬ ಕೆಟ್ಟದಾಗಿ ತೋರಿಸಿ ನಾನು ಕೆಟ್ಟವಳೆಂದು ಬಿಂಬಿಸಲಾಗುತ್ತಿದೆ. ನನಗೆ ಭರವಸೆ ಇದೆ. ನಾನು ಇದೆಲ್ಲದರಿಂದ ಹೊರ ಬರುವೆ ಎಂದು. ಈ ಸಂಬಂಧ ನಾನು ನನ್ನ ವಕೀಲರೊಂದಿಗೆ ಸಂಪರ್ಕದಲ್ಲಿದ್ದೇನೆ. ಏನೆಲ್ಲ ನಡೆಯುತ್ತಿದೆ ಎಂಬುದನ್ನೂ ನಾನು ಗಮನಿಸುತ್ತಿದ್ದೇನೆ. ಸತ್ಯ ಮೇವ ಜಯತೆ. ಸತ್ಯವೇ ಮೇಲುಗೈ ಸಾಧಿಸುತ್ತದೆ’ ಎಂದಿದ್ದಾರೆ.
ಇದನ್ನೂ ಓದಿ: ಹುಟ್ಟುಹಬ್ಬದಂದು ಮೂರು ಲಕ್ಷ ಕೆಲಸ ಘೋಷಿಸಿದ ಸೋನು ಸೂದ್
‘ನನಗೆ ಸಾಕಷ್ಟು ಕೊಲೆ ಹಾಗೂ ಅತ್ಯಾಚಾರ ಬೆದರಿಕೆಗಳು ಬರುತ್ತಿವೆ. ಅಲ್ಲದೆ, ಸುಶಾಂತ್ ಆತ್ಮಹತ್ಯೆಯಿಂದ ನಾನು ತೀವ್ರ ಆಘಾತಕ್ಕೆ ಒಳಗಾಗಿದ್ದೇನೆ. ನಾನು ಮತ್ತು ಸುಶಾಂತ್ ಲಿವಿಂಗ್ ರಿಲೇಶನ್ಶಿಪ್ನಲ್ಲಿ ಇದ್ದಿದ್ದು ನಿಜ. ಜೂನ್ 8ರವರೆಗೆ ಮಾತ್ರ ನಮ್ಮ ಸಂಬಂಧ ಇತ್ತು. ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದರು. ಅದನ್ನು ಹೋಗಲಾಡಿಸಲು ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರು. ಇದರಲ್ಲಿ ನನ್ನ ಪಾತ್ರವೇನಿಲ್ಲ. ಈ ಪ್ರಕರಣದಲ್ಲಿ ಅರ್ಜಿದಾರ (ಸುಶಾಂತ್ ತಂದೆ) ನನ್ನನ್ನು ತಪ್ಪಾಗಿ ಸೂಚಿಸಿದ್ದಾರೆ’ ಎಂದೂ ಹೇಳಿಕೊಂಡಿದ್ದರು.
ಇನ್ನು ಸುಶಾಂತ್ ತಂದೆ ರಿಯಾ ವಿರುದ್ಧ ಕಳೆದ ಶನಿವಾರ ದೂರು ದಾಖಲಿಸಿದ್ದಾರೆ. ಇದರ ನಡುವೆ ರಿಯಾ ಸಹ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ತನಿಖೆಯನ್ನು ಬಿಹಾರ ಪೊಲೀಸರಿಂದ ಮುಂಬೈ ಪೊಲೀಸರಿಗೆ ವರ್ಗಾಯಿಸಲು ಕೋರಿದ್ದಾರೆ. (ಏಜೆನ್ಸೀಸ್)