

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಾರಕ್ಕೆ 10 ಪ್ಲಸ್ ಚಿತ್ರಗಳು ಬಿಡುಗಡೆಯಾಗುವುದು ಹೊಸದಲ್ಲವೇ ಅಲ್ಲ. ಕಳೆದ ವರ್ಷವೇ ಮೂರ್ನಾಲ್ಕು ಬಾರಿ ಎಂಟಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಆದರೆ, ವರ್ಷ ಪ್ರಾರಂಭವಾಗಿ ಈ ಏಳು ವಾರಗಳಲ್ಲಿ ಯಾವೊಂದು ವಾರವೂ ಇಷ್ಟೊಂದು ಸಂಖ್ಯೆಯ ಚಿತ್ರಗಳು ಬಿಡುಡೆಯಾಗಿರಲಿಲ್ಲ. ಫೆ.10ರಂದು 9 ಹೊಸ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಅದರ ಜತೆಗೆ ಒಂದು ಡಬ್ಬಿಂಗ್ ಮತ್ತು ಒಂದು ಹಳೆಯ ಚಿತ್ರ ಮರುಬಿಡುಗಡೆಯಾಗುತ್ತಿದೆ.
ವಿಶೇಷವೆಂದರೆ, ಈ 9 ಸಿನಿಮಾಗಳ ಪೈಕಿ ಹೊಸಬರ ಚಿತ್ರಗಳೇ ಹೆಚ್ಚು. ಹಳಬರ ಚಿತ್ರಗಳು ಒಂದಿಷ್ಟು ಇವೆಯಾದರೂ, ಆ ಚಿತ್ರಗಳನ್ನು ನಿರ್ದೇಶಿಸಿರುವುದು ಸಹ ಹೊಸಬರೇ ಎನ್ನುವುದು ವಿಶೇಷ.
ಅಂದಹಾಗೆ, ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳ ಪೈಕಿ ಪ್ರವೀಣ್ ತೇಜ್, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಭಾವನಾ ರಾವ್ ಮುಂತಾದವರು ನಟಿಸಿರುವ 'ಹೊಂದಿಸಿ ಬರೆಯಿರಿ', ವಿಜಯ್ ಜಗದಾಲ್, ಕ್ರಿಷಿ ತಾಪಂಡ, ಚಂದನಾ ಪ್ರಮುಖ ತಾರಾಗಣದಲ್ಲಿರುವ 'ರೂಪಾಯಿ', ಅನಿತಾ ಭಟ್, ಪವನ್ ಶೆಟ್ಟಿ, ಶಫಿ ನಟಿಸಿರುವ 'ಬೆಂಗಳೂರು 69', ಪ್ರತಾಪ್ ನಾರಾಯಣ್ ಮತ್ತು ರಂಗಾಯಣ ರಘು ಅಭಿನಯದ 'ಉತ್ತಮರು', ರಾಜೀವ್ ರಾಥೋಡ್, 'ದುನಿಯಾ' ರಶ್ಮಿ ನಟಿಸಿರುವ 'ರಂಗಿನ ರಾಟೆ', ಅರ್ಜುನ್ ಯೋಗೇಶ್, ಸುಪ್ರಿತಾ ಸತ್ಯನಾರಾಯಣ್, ತೇಜಸ್ವಿನಿ ಶೇಖರ್ ತಾರಾಗಣದಲ್ಲಿರುವ 'ಲಾಂಗ್ ಡ್ರೈವ್', ನಾಗರಾಜ್ ನಿರ್ದೇಶನದ ಹಾರರ್ ಸಿನಿಮಾ 'ಡಿಸೆಂಬರ್ 24', ಹೊಸಬರ 'ಒಂದಾನೊಂದು ಕಾಲದಲ್ಲಿ' ಹಾಗೂ ಸ್ಮೈಲ್ ಶ್ರೀನ್ ನಿರ್ದೇಶನದ '18 ಟು 25' ಚಿತ್ರಗಳು ಇಂದು ತೆರೆಗೆ ಬರುತ್ತಿವೆ.
ಇದಲ್ಲದೆ ಬಾಬ್ಬಿ ಸಿಂಹ ಅಭಿನಯದ ತಮಿಳು ಚಿತ್ರ 'ವಸಂತ ಕೋಕಿಲ' ಕನ್ನಡದಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಇದೆಲ್ಲದರ ಜತೆಗೆ ದಿಗಂತ್ ಅಭಿನಯದ ಹಳೆಯ ಚಿತ್ರ 'ಲೈಫು ಇಷ್ಟೇನೆ' ಚಿತ್ರ ಮರುಬಿಡುಗಡೆಯಾಗುತ್ತಿದೆ.