

ಮುಂಬೈ: 'ಸೂರ್ಯವಂಶಿ' ಮತ್ತು '83' ಚಿತ್ರಗಳ ಬಿಡುಗಡೆ ಯಾವಾಗ?
ಇಂಥದ್ದೊಂದು ಪ್ರಶ್ನೆ ಎಲ್ಲರನ್ನೂ ಹಲವು ದಿನಗಳಿಂದ ಕಾಡುತ್ತಲೇ ಇದಕ್ಕೆ. ಅದಕ್ಕೆ ಕಾರಣ, ಈ ಎರಡೂ ಚಿತ್ರಗಳನ್ನು ವರ್ಷಾಂತ್ಯಕ್ಕೆ ಬಿಡಗುಡೆ ಮಾಡುವುದಕ್ಕೆ ಎರಡು ಚಿತ್ರಗಳನ್ನು ನಿರ್ಮಿಸಿರುವ ರಿಲಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ನಿರ್ಧರಿಸಿತ್ತು. ಆದರೆ, ಈ ಯೋಚನೆಯಲ್ಲಿ ಒಂದಿಷ್ಟು ಬದಲಾವಣೆಯಾಗಿದ್ದು, '83' ಚಿತ್ರವು ಕ್ರಿಸ್ಮಸ್ಗೆ ಬಿಡುಗಡೆಯಾದರೆ, 'ಸೂರ್ಯವಂಶಿ' ಚಿತ್ರವು ಮುಂದಿನ ವರ್ಷ ಬಿಡುಗಡೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: ಸುಮ್ಮನೆ ಸುಳ್ಳು ಹೇಳಬೇಡಿ: ಸಿಬಿಐ ಎಚ್ಚರಿಕೆ
ಬೇರೆಲ್ಲಾ ದೊಡ್ಡ ಚಿತ್ರಗಳು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದ್ದರೆ, ಇತ್ತ ಅಕ್ಷಯ್ ಕುಮಾರ್ ಅಭಿನಯದ 'ಸೂರ್ಯವಂಶಿ' ಮತ್ತು ರಣವೀರ್ ಸಿಂಗ್ ಅಭಿನಯದ '83' ಚಿತ್ರಗಳನ್ನು ನಿರ್ಮಿಸಿದ್ದ ರಿಲಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ಮಾತ್ರ, ಯಾವುದೇ ಕಾರಣಕ್ಕೂ ಆ ಎರಡೂ ಚಿತ್ರಗಳನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಅದರಂತೆ, ದೀಪಾವಳಿ ಹೊತ್ತಿಗೆ 'ಸೂರ್ಯವಂಶಿ' ಮತ್ತು ಕ್ರಿಸ್ಮಸ್ ಸಮಯದಲ್ಲಿ '83' ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಕ್ರಿಸ್ಮಸ್ಗೆ '83' ಚಿತ್ರ ಬಿಡುಗಡೆ ಆಗುವುದರಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, 'ಸೂರ್ಯವಂಶಿ' ಚಿತ್ರವನ್ನು ಮಾತ್ರ ಮುಂದಿನ ವರ್ಷ ಬಿಡುಗಡೆ ಮಾಡುವುದಕ್ಕೆ ರಿಲಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆಯು ನಿರ್ಧರಿಸಿದೆ.
ಈ ಪೈಕಿ '83' ಚಿತ್ರವು, 1983ರಲ್ಲಿ ಭಾರತ ಕ್ರಿಕೆಟ್ ತಂಡವು ವಿಶ್ವಕಪ್ ಗೆದ್ದ ಕಥಾನಕ ಹೊಂದಿದ್ದು, ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಕಪಿಲ್ ದೇವ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ದೀಪಿಕಾ ಪಡುಕೋಣೆ, ಜೀವ, ಪಂಕಜ್ ತ್ರಿಪಾಠಿ, ಬೋಮನ್ ಇರಾನಿ ಮುಂತಾದವರು ನಟಿಸಿರುವ ಈ ಚಿತ್ರವನ್ನು ಕಬೀರ್ ಖಾನ್ ನಿರ್ದೇಶನ ಮಾಡಿದ್ದಾರೆ.