

ಮುಂಬೈ: ಸುಶಾಂತ್ ಮತ್ತು ರಿಯಾ ಚಕ್ರವರ್ತಿ ಇಬ್ಬರನ್ನೂ ಜೂನ್ 13ರಂದು ನೋಡಿದ್ದಾಗಿ, ರಿಯಾ ಪಕ್ಕದ ಮನೆಯ ಡಿಂಪಲ್ ತವಾನಿ ಎನ್ನುವವರು ಹೇಳಿದ್ದರು. ಇದೀಗ ಅವರು ಉಲ್ಟಾ ಹೊಡೆದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಅವರಿಗೆ ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ.
ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದು ಜೂನ್ 14ರಂದು. ಅದರ ಮುನ್ನಾ ದಿನ ಅಂದರೆ ಜೂನ್ 13ರಂದು ಸುಶಾಂತ್ ಅವರು ರಿಯಾ ಮನೆಗೆ ಬಂದಿದ್ದರು ಮತ್ತು ಅವರಿಬ್ಬರನ್ನು ನೋಡಿದ್ದಾಗಿ ಡಿಂಪಲ್ ಮಾಧ್ಯಮಗಳೆದುರು ಹೇಳಿಕೊಂಡಿದ್ದರು.
ಈ ವಿಷಯವಾಗಿ ಇತ್ತೀಚೆಗೆ ಸಿಬಿಐ ಅಧಿಕಾರಿಗಳು, ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ಡಿಂಪಲ್ ಅವರು ತಾವು ಸುಶಾಂತ್ ಮತ್ತು ರಿಯಾ ಅವರನ್ನು ಆ ದಿನ ಒಟ್ಟಿಗೆ ನೋಡಿಲ್ಲ ಮತ್ತು ಆ ವಿಷಯವನ್ನು ಬೇರೆ ಯಾರೋ ತಮಗೆ ಹೇಳಿದರು ಎಂದು ಹೇಳಿದ್ದಾರೆನ್ನಲಾಗಿದೆ. ಅಷ್ಟೇ ಅಲ್ಲ, ತಮಗೆ ಈ ವಿಷಯವನ್ನು ಹೇಳಿದ ವ್ಯಕ್ತಿ ಸಹ ಸುಶಾಂತ್ ಮತ್ತು ರಿಯಾ ಒಟ್ಟಿಗೆ ಇದ್ದುದನ್ನು ನೋಡಿಲ್ಲ ಎಂದು ಒಪ್ಪಿಕೊಂಡಿದ್ದಾರಂತೆ.
ತನಿಖೆಯ ಹಾದಿಯನ್ನು ಡಿಂಪಲ್ ಅವರು ತಪ್ಪಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸಿಬಿಐ ಅಧಿಕಾರಿಗಳು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ತಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ಹೀಗೆ ಮಾಧ್ಯಮದವರ ಎದುರು ಬೇಕಾಬಿಟ್ಟಿ ಮಾತನಾಡಬಾರದು ಎಂದು ಹೇಳಿ ಕಳುಹಿಸಿದ್ದಾರಂತೆ.
ಇನ್ನು, ರಿಯಾ ಚಕ್ರವರ್ತಿ ಅವರನ್ನು ಸುಶಾಂತ್ ಸಾವಿನ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಬಂಧಿಸಿದ್ದು, 28 ದಿನಗಳ ನಂತರ ಕಳೆದ ವಾರವಷ್ಟೇ ರಿಯಾಗೆ ಬೇಲ್ ಸಿಕ್ಕಿದೆ.