ದಶಕದ ಫ್ಲಾಪ್ ಸಿನಿಮಾ ಪಟ್ಟಿಗೆ 83; ನಿರ್ಮಾಪಕರಿಗೆ 70 ಕೋಟಿ ರೂಪಾಯಿ ನಷ್ಟ

83
Published on

1983ರಲ್ಲಿ ಭಾರತ ಮೊದಲ ಸಲ ವಿಶ್ವಕಪ್ ಕಪ್ ಎತ್ತಿ ಹಿಡಿದಿತ್ತು. ಆ ಗೆಲುವಿನ ಹಿಂದಿನ ಕಾಣದ ಕಥೆ ಸಿನಿಮಾ ರೂಪದಲ್ಲಿ ತೆರೆಗೆ ಬರಲಿದೆ ಎಂದಾಗಲೇ ಎಲ್ಲರಿಗೂ ಅಚ್ಚರಿ ಜತೆಗೆ ಕುತೂಹಲವಿತ್ತು. ರಣವೀರ್ ಸಿಂಗ್ ನಟನೆಯ ‘83’ ಚಿತ್ರದ ಟ್ರೇಲರ್ ಬಿಡುಗಡೆಯಾದಾಗ ಮೆಚ್ಚಿ ಕೊಂಡಾಡಿದವರೇ ಹೆಚ್ಚು. ಆದರೆ, ಸಿನಿಮಾ ಬಿಡುಗಡೆ ಆದ ಮೇಲೆ ಗಳಿಕೆಯಲ್ಲಿ ಸೋತು, ದಶಕದ ಫ್ಲಾಪ್ ಸಿನಿಮಾಗಳ ಪಟ್ಟಿಗೆ ಸೇರಿದೆ ಎಂದರೆ ನೀವು ನಂಬಲೇಬೇಕು! ಕಬೀರ್ ಖಾನ್ ನಿರ್ದೇಶನದಲ್ಲಿ ಮೂಡಿಬಂದಿರುವ ‘83’ ಚಿತ್ರಕ್ಕೆ ದೀಪಿಕಾ ಪಡುಕೋಣೆ ಸೇರಿ ಹಲವರು ಜಂಟಿಯಾಗಿ ಹೂಡಿಕೆ ಮಾಡಿದ್ದರು. ಒಟ್ಟು 260 ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾಗಿದ್ದ ಈ ಸಿನಿಮಾ, ಡಿ. 24ರಂದು ವಿಶ್ವದಾದ್ಯಂತ ತೆರೆಕಂಡಿತ್ತು. ಅಲ್ಲಿಂದ ಇಲ್ಲಿಯವರೆಗೂ 100 ಕೋಟಿ ಗಳಿಸಲಷ್ಟೇ ಈ ಚಿತ್ರ ಶಕ್ತವಾಗಿದೆ. ಒಟಿಟಿ ಮತ್ತು ಸ್ಯಾಟಲೈಟ್ ಸೇರಿ ಹಲವು ಹಕ್ಕುಗಳಿಂದ 80 ಕೋಟಿ ಬಂದಿದೆಯಾದರೂ, ಬರೋಬ್ಬರಿ 70 ಕೋಟಿ ಕಳೆದುಕೊಂಡು ಗಳಿಕೆಯಲ್ಲಿ ಫ್ಲಾಪ್ ಆಗಿದೆ. ಬಿಡುಗಡೆಗೂ ಮುನ್ನ ಸಿನಿಮಾ ಮಂದಿಯ ಜತೆಗೆ ದಿಗ್ಗಜ ಮಾಜಿ ಕ್ರಿಕೆಟ್ ದಂತಕತೆಗಳೇ ಪ್ರಚಾರ ಕಣಕ್ಕೆ ಧುಮುಕಿದರೂ, ಚಿತ್ರ ಗಳಿಕೆ ವಿಚಾರದಲ್ಲಿ ಮೋಡಿ ಮಾಡಲೇ ಇಲ್ಲ. -ಏಜೆನ್ಸೀಸ್

ಸೋತು ಸುಣ್ಣವಾದ ಚಿತ್ರಗಳಿವು: 2011ರಿಂದ 2021ರ ಅವಧಿಯಲ್ಲಿ ಬಾಲಿವುಡ್​ನಲ್ಲಿ ದೊಡ್ಡ ಬಜೆಟ್​ನ ದೊಡ್ಡ ಸಿನಿಮಾಗಳು ತೆರೆಗೆ ಬಂದಿವೆ. ಕೆಲವು ಸಿನಿಮಾಗಳಿಗೆ ಅನಿರೀಕ್ಷಿತ ಗೆಲುವು ದಕ್ಕಿದರೆ, ಇನ್ನು ಕೆಲವು ಬಹುನಿರೀಕ್ಷಿತ ಸಿನಿಮಾಗಳು ಸೋಲೊಪ್ಪಿಕೊಂಡು ಮರೆಯಾಗಿವೆ. 2012ರಲ್ಲಿ ಅಕ್ಷಯ್ ಕುಮಾರ್ ನಟನೆಯ ‘ಜೋಕರ್’ ಚಿತ್ರ ಹಾಕಿದ ಬಂಡವಾಳ ಬಿಟ್ಟು 30 ಕೋಟಿ ರೂ. ಕಳೆದುಕೊಂಡಿತ್ತು. ರಣಬೀರ್ ನಟನೆಯ ‘ಬಾಂಬೆ ವೆಲ್ವೆಟ್’ ಚಿತ್ರಕ್ಕೆ 75 ಕೋಟಿ ರೂ ನಷ್ಟವಾದರೆ, ಹೃತಿಕ್ ‘ಮೆಹೆಂಜೋದಾರೋ’ 60 ಕೋಟಿ, ‘ಜಗ್ಗ ಜಾಸೂಸ್’ 50 ಕೋಟಿ, ‘ರಂಗೂನ್’ 70 ಕೋಟಿ, ‘ಕಳಂಕ್’ 40 ಕೋಟಿ ... ಹೀಗೆ ಇನ್ನೂ ಹಲವು ಸಿನಿಮಾಗಳು ಈ ಫ್ಲಾಪ್ ಪಟ್ಟಿಯಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net