ಜೂ. ಚಿರುಗೆ 6 ತಿಂಗಳು; ಪುಟಾಣಿಯ ಫೋಟೋ ಹಂಚಿಕೊಂಡ ಮೇಘನಾ

Chiru
Published on

ಬೆಂಗಳೂರು: ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದ್ದ ಸರ್ಜಾ ಕುಟುಂಬಕ್ಕೆ ಅಕ್ಟೋಬರ್ 22ರಂದು ಅವರ ಬಾಡಿದ ಮುಖವನ್ನು ಅರಳಿಸಲು ಮುದ್ದು ಮಗುವೇ ಬರಬೇಕಾಯಿತು. ಅಂದು ಚಿರು ಪತ್ನಿ ಮೇಘನಾ ರಾಜ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಜೂ. ಚಿರುಗೆ ಆರು ತಿಂಗಳ ಸಂಭ್ರಮ. ಆ ಪುಟಾಣಿಯ ಫೊಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಮೇಘನಾ, ನಮ್ಮ ಮನೆಯ ಪುಟಾಣಿಗೀಗ ಆರು ತಿಂಗಳು ತುಂಬಿತು ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ. ಜೂ. ಚಿರುಗೆ ಶುಭಾಶಯಗಳ ಸುರಿಮಳೆಯೂ ಹರಿದುಬಂದಿದೆ.

ಅಂದಹಾಗೆ, ಅಕ್ಟೋಬರ್ 22 ಎಂಬ ದಿನಾಂಕದಲ್ಲಿಯೇ ಒಂದು ವಿಶೇಷತೆ ಇದೆ. 2017ರ ಅಕ್ಟೋಬರ್ 22 ರಂದು ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕಳೆದ ವರ್ಷದ ಅಕ್ಟೋಬರ್ 22ರಂದು ಜೂ. ಚಿರು ಆಗಮನವಾಗಿತ್ತು. ಚಿರು ಕಣ್ಮಚ್ಚಿದ ನೋವಲ್ಲಿಯೇ ಕಾಲ ಕಳೆದಿದ್ದ ಎರಡೂ ಕುಟುಂಬಗಳಿಗೆ ಮುದ್ದು ಮಗುವಿನ ಆಗಮನ ನಗು ಮೂಡಿಸಿತ್ತು. ಫೆ. 14ರಂದು ಮಗುವಿನ ಫೋಟೋವನ್ನೂ ಮೇಘನಾ ಅನಾವರಣ ಮಾಡಿದ್ದರು. ಇದೀಗ ಆರು ತಿಂಗಳೇ ಗತಿಸಿವೆ. ಆರು ತಿಂಗಳಾದರೂ, ಮಗುವಿನ ಹೆಸರೇನು ಎಂಬುದನ್ನು ಇಲ್ಲಿಯವರೆಗೂ ಮೇಘನಾ ಹೇಳಿಕೊಂಡಿಲ್ಲ. ಈಗಲಾದರೂ ಮಗುವಿನ ಹೆಸರನ್ನು ಘೊಷಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net