ಸೆನ್ಸಾರ್ ಆಯ್ತು ನಾರಾಯಣ್​ ನಿರ್ದೇಶನದ '೫ಡಿ'; ಸದ್ಯದಲ್ಲೇ ಟ್ರೇಲರ್​ ಬಿಡುಗಡೆ

5D New
Published on

ಬೆಂಗಳೂರು: ಸೆಂಟಿಮೆಂಟ್​, ಕಾಮಿಡಿ ಮತ್ತು ಲವ್​ ಜಾನರ್​ಗಳ ಚಿತ್ರ ಮಾಡುವುದರಲ್ಲಿ ಎಸ್​. ನಾರಾಯಣ್​ ದೊಡ್ಡ ಹೆಸರು. ಈಗವರು ತಮ್ಮ ಜಾನರ್ ಬಿಟ್ಟು ಹೊಸದೊಂದು ಪ್ರಯತ್ನಕ್ಕೆ ಕೈಹಾಕಿದ್ದು, ಅದರ ಫಲವೇ '5ಡಿ'. ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​ ಚಿತ್ರವಾಗಿದ್ದು, ಈಗಾಗಲೇ ನಾರಾಯಣ್​ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ. ಚಿತ್ರವನ್ನು ಸೆನ್ಸಾರ್​ ಮಂಡಳಿಯವರು ವೀಕ್ಷಿಸದ್ದು, ಸದ್ಯದಲ್ಲೇ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಚಿತ್ರದ ಟ್ರೇಲರ್​ ಬಿಡುಗಡೆಯಾಗಲಿದೆ.

'೫ಡಿ' ಚಿತ್ರವನ್ನು ೧ ಟು ೧೦೦ ಡ್ರೀಮ್ ಮೂವೀಸ್ ಮೂಲಕ ಸ್ವಾತಿ ಕುಮಾರ್ ನಿರ್ಮಾಣ ಮಾಡಿದ್ದಾರೆ. '೫ಡಿ' ಎಂದರೆ ಐದು ಡೈಮನ್‌ಷನ್, ಐದು ಮ್ಯಾನರಿಸಂ, ಐದು ಕಥೆಗಳು ಹೀಗೆ ಏನಾದರೂ ಆಗಿರಬಹುದು, ಅದಕ್ಕೆ ಸಿನಿಮಾದಲ್ಲಿ ಸೂಕ್ತ ಉತ್ತರವಿದೆಯಂತೆ. ಕ್ಷಣಕ್ಷಣಕ್ಕೂ ರೋಮಾಂಚನ, ಕುತೂಹಲ, ನಿರೀಕ್ಷಿಸಲಾರದಷ್ಟು ತಿರುವುಗಳನ್ನು ಒಳಗೊಂಡಿರುವ '೫ಡಿ' ಚಿತ್ರಕತೆಯನ್ನು ರಚಿಸುವಾಗಲೇ ನಿರ್ದೇಶಕ ನಾರಾಯಣ್ ಪ್ರತಿಹಂತದಲ್ಲೂ ಜಾಗೃತವಹಿಸಿ ನೋಡುಗರನ್ನು ಬೆರಗಾಗಿಸುವಂಥ ಸನ್ನಿವೇಶಗಳನ್ನು ಚಿತ್ರದಲ್ಲಿಟ್ಟಿದ್ದಾರಂತೆ.

ಈ ಕುರಿತು ಮಾತನಾಡಿರುವ ಎಸ್​. ನಾರಾಯಣ್​, 'ಇಲ್ಲಿಯವರೆಗೂ ಕೌಟುಂಬಿಕ ಸಿನಿಮಾಗಳನ್ನು ಮಾಡಿದ್ದ ನಾನು ಇದೀಗ ಮೊದಲ ಬಾರಿ ಕೆಂ, ಥ್ರಿಲ್ಲರ್​ ಶೈಲಿಯ ಚಿತ್ರ ಮಾಡುತ್ತಿದ್ದೇನೆ. ಇಷ್ಟು ವರ್ಷದ ಸಿನಿಮಾ ಜೀವನದಲ್ಲಿ ನನಗೂ ಇದು ಮೊದಲ ಅನುಭವ ಪ್ರೇಕ್ಷಕರಷ್ಟೇ ಕುತೂಹಲ ನನಗೂ ಇದೆ' ಎನ್ನುತ್ತಾರೆ ಎಸ್​. ನಾರಾಯಣ್​.

'5ಡಿ' ಚಿತ್ರದಲ್ಲಿ ಆದಿತ್ಯ ನಾಯಕನಾಗಿ ಕಾಣಿಸಿಕೊಂಡಿದ್ದು, ಅವರಿಗೆ ನಾಯಕಿಯಾಗಿ ಅದಿತಿ ನಟಿಸಿದ್ದಾರೆ. ಎಸ್​. ನಾರಾಯಣ್​ ಸಹ ಚಿತ್ರದಲ್ಲೊಂದು ವಿಭಿನ್ನ ಪಾತ್ರ ಮಾಡಿದ್ದಾರೆ. ನಟನೆ, ನಿರ್ದೇಶನವಷ್ಟೇ ಅಲ್ಲ, ಸಾಹಿತ್ಯ ಬರೆದು, ಸಂಗೀತವನ್ನೂ ಅವರೇ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net