

ಮುಂಬೈ: ಭಾರತೀಯ ಎವರ್ಗ್ರೀನ್ ಚಿತ್ರಗಳ ಪೈಕಿ ಆಮೀರ್ ಖಾನ್ ಅಭಿನಯದ 'ಥ್ರೀ ಈಡಿಯಟ್ಸ್' ಸಹ ಒಂದು. ಶಿಕ್ಷಣ ವ್ಯವಸ್ಥೆಯನ್ನು ವಿಡಂಬನಾತ್ಮಕವಾಗಿ ತೋರಿಸಿರುವ ಈ ಚಿತ್ರವು 2009ರಲ್ಲಿ ಬಿಡುಗಡೆಯಾದ, ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ರಾಜಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರದಲ್ಲಿ ಆಮೀರ್ ಜತೆಗೆ ಮಾಧವನ್ ಮತ್ತು ಶರ್ಮಾನ್ ಜೋಷಿ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ನಯನತಾರಾಗೂ ಕಾಸ್ಟಿಂಗ್ ಕೌಚ್ ಅನುಭವವಾಗಿತ್ತಂತೆ!
ಈಗ್ಯಾಕೆ ಈ ಚಿತ್ರದ ವಿಷಯ ಎಂಬ ಪ್ರಶ್ನೆ ಬರಬಹುದು. ವಿಷಯವೇನೆಂದರೆ, 14 ವರ್ಷಗಳ ನಂತರ ಈ ಚಿತ್ರದಲ್ಲಿ 'ಥ್ರೀ ಈಡಿಯಟ್ಸ್' ಆಗಿದ್ದ ಆಮೀರ್, ಶರ್ಮಾನ್ ಮತ್ತು ಮಾಧವನ್ ಜತೆಯಾಗಿದ್ದಾರೆ. ಹಾಗಿದ್ದರೆ, ಆ ಚಿತ್ರದ ಮುಂದುವರೆದ ಭಾಗ ಬರುತ್ತಿರಬಹುದು ಎಂದನಿಸಬಹುದು.
ಹಾಗೇನಿಲ್ಲ, ಶುಕ್ರವಾರ (ಫೆಬ್ರವರಿ 03) ಶರ್ಮಾನ್ ಅಭಿನಯದ 'ಕಂಗ್ರಾಜುಲೇಷನ್ಸ್' ಎಂಬ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರದ ಪ್ರಚಾರಕ್ಕಾಗಿ ಈ ಮೂವರೂ ಸೇರಿದ್ದಾರೆ. ಮೊದಲು ಶರ್ಮಾನ್ ಚಿತ್ರದ ಬಗ್ಗೆ ಮಾತನಾಡುತ್ತಿರುತ್ತಾರೆ. ಆ ನಂತರ ಮಾಧವನ್ ಮತ್ತು ಆಮೀರ್ ಸಹ ಬಂದು ಸೇರಿಕೊಳ್ಳುತ್ತಾರೆ. ಟಿಪಿಕಲ್ 'ಥ್ರೀ ಈಡಿಯಟ್ಸ್' ಶೈಲಿಯಲ್ಲಿ ಅವರಿಬ್ಬರೂ ಶರ್ಮಾನ್ ಅವರನ್ನು ಕಿಚಾಯಿಸುತ್ತಾರೆ. ಕೊನೆಗೆ ಅವರಿಬ್ಬರ ಕಾಟ ತಾಳಲಾರದೆ, ಶರ್ಮಾನ್ ಅವರಿಬ್ಬರಿಂದ ದೂರ ಓಡಿ ಚಿತ್ರದ ಬಗ್ಗೆ ಮಾತನಾಡುತ್ತಾರೆ.
ಶರ್ಮಾನ್ ತಮ್ಮ ಟ್ವಿಟರ್ ಖಾತೆ ಮೂಲಕ ಹಂಚಿಕೊಂಡ ಈ ವಿಡಿಯೋ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ಇದನ್ನು ನೋಡಿದವರೆಲ್ಲ, 'ಥ್ರೀ ಈಡಿಯಟ್ಸ್'ನ ಮುಂದುವರೆದ ಭಾಗ ಆದಷ್ಟು ಬೇಗ ಬರಲಿ ಎಂದು ಹಾರೈಸಿದ್ದಾರೆ. ಬಹಳ ದಿನಗಳ ನಂತರ ಮೂವರನ್ನೂ ಒಟ್ಟಿಗೆ ನೋಡಿದ್ದಿಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.