![Chitrotsava]](http://media.assettype.com/vijayavani-media%2Fimport%2Fcdn.vvimgs.com%2Fwp-content%2Fuploads%2F2020%2F02%2FChitrotsava.jpg?w=480&auto=format%2Ccompress&fit=max)
![Chitrotsava]](http://media.assettype.com/vijayavani-media%2Fimport%2Fcdn.vvimgs.com%2Fwp-content%2Fuploads%2F2020%2F02%2FChitrotsava.jpg?w=480&auto=format%2Ccompress&fit=max)
ಬೆಂಗಳೂರು: 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆ. 26ರಿಂದ ಮಾ. 4ರವರೆಗೆ ನಡೆಯಲಿದ್ದು, ಆಸ್ಕರ್ ಪ್ರಶಸ್ತಿ ಪಡೆದ ಪ್ಯಾರಸೈಟ್ ಸೇರಿ 60 ದೇಶಗಳ 225 ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.
13 ದಿನಗಳ ಚಿತ್ರೋತ್ಸವದಲ್ಲಿ 60 ದೇಶಗಳ 225 ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಅದರಲ್ಲಿ ಆಸ್ಕರ್ ವಿಜೇತ ಚಲನಚಿತ್ರ ಪ್ಯಾರಸೈಟ್ ಸೇರಿ ಕಾನ್, ಬರ್ಲಿನ್, ವೆನಿಸ್, ಟೊರೆಂಟೋ, ಗೋವಾ, ಮುಂಬೈ ಮತ್ತು ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಚಲನಚಿತ್ರಗಳು ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿವೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮುಖ್ಯಮಂತ್ರಿ ಬಿಎಸ್ವೈ ಚಾಲನೆ: ಫೆ. 26 ರಂದು ಸಂಜೆ 6 ಗಂಟೆಗೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ವೇಳೆ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಡಿ.ವಿ.ಸದಾನಂದಗೌಡ, ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ.ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ್, ಲಕ್ಷ್ಮಣ ಸವದಿ ಉಪಸ್ಥಿತರಿರಲಿದ್ದಾರೆ. ಅವರ ಜತೆಗೆ ಚಲನಚಿತ್ರ ನಟ ಯಶ್, ನಟಿ ಜಯಪ್ರದ, ನಿರ್ವಪಕ ಬೋನಿ ಕಪೂರ್, ಗಾಯಕ ಸೋನು ನಿಗಮ್ ಜತೆಗೂಡಲಿದ್ದಾರೆ ಎಂದು ತಿಳಿಸಿದರು.
ಬುಕ್ ಮೈ ಶೋನಲ್ಲಿ ಫೆ. 24ರವರೆಗೆ ನೋಂದಣಿ ಮಾಡಿಕೊಂಡು ಪಾಸ್ ಪಡೆಯಲು ಅವಕಾಶ ನಂದಿನಿ ಲೇಔಟ್ನಲ್ಲಿರುವ ಚಲನಚಿತ್ರೋತ್ಸವ ಕಚೇರಿಯಲ್ಲಿ ಫೆ. 26ರವರೆಗೆ ಪಾಸ್ ಪಡೆಯಬಹುದು ಹಿರಿಯರಿಗೆ 800 ರೂ. ಮತ್ತು ವಿದ್ಯಾರ್ಥಿಗಳು, ಫಿಲಂ ಸೊಸೈಟಿ ಸದಸ್ಯರು ಮತ್ತು ವಾಣಿಜ್ಯ ಮಂಡಳಿ ಸದಸ್ಯರಿಗೆ 400 ರೂ. ಶುಲ್ಕ ನಿಗದಿ ಹೆಚ್ಚಿನ ಮಾಹಿತಿಗೆ www.biffes.in ಭೇಟಿ ನೀಡಬಹುದು
ಖಾರ್ ಉದ್ಘಾಟನಾ ಚಿತ್ರ
ಉದ್ಘಾಟನಾ ಚಿತ್ರವಾಗಿ ಇರಾನಿ ಚಲನಚಿತ್ರ ‘ಖಾರ್’ ಪ್ರದರ್ಶನಗೊಳ್ಳಲಿದೆ. ಅದೇ ರೀತಿ ಮಾ.4ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಮುಕ್ತಾಯ ಚಿತ್ರವಾಗಿ ಇಸ್ರೇಲಿನ ಇವೆಗಿನಿ ರುಮಾನ್ ನಿರ್ದೇಶನದ ‘ಗೋಲ್ಡನ್ ವಾಯ್್ಸ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.
ವಿಶ್ವ ಸಿನಿ ಇತಿಹಾಸ ಅನಾವರಣ
ವಿಶ್ವ ಚಲನಚಿತ್ರಕ್ಕೆ 125 ವರ್ಷ ಸಂದಿರುವ ಹಿನ್ನೆಲೆಯಲ್ಲಿ ಕಳೆದ 12 ದಶಕಗಳಲ್ಲಿ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಪ್ರತಿ ದಶಕದಿಂದ ಒಂದೊಂದು ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ವಿಶ್ವ ಕ್ಲಾಸಿಕ್ ಚಲನಚಿತ್ರಗಳು ನೋಡುಗರಿಗೆ ಅಚ್ಚರಿಯನ್ನುಂಟು ಮಾಡಲಿವೆ ಎಂದು ಪುರಾಣಿಕ್ ವಿವರಿಸಿದರು.
ಚಿತ್ರೋತ್ಸವದ ಆಕರ್ಷಣೆ, ವಿಶೇಷತೆ
ನಾಲ್ಕು ಕಡೆ ಪ್ರದರ್ಶನ
4 ವಿಭಾಗದಲ್ಲಿ ಸ್ಪರ್ಧೆ
ಏಶಿಯನ್, ಭಾರತೀಯ, ಕನ್ನಡ ಮತ್ತು ಕನ್ನಡ ಜನಪ್ರಿಯ ಮನರಂಜನಾ ಚಿತ್ರ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.
ಸಂಗೀತ ಪರಂಪರೆ ಮತ್ತು ಸಿನಿಮಾ
ಈ ಬಾರಿ ‘ಭಾರತೀಯ ಸಾಂಪ್ರದಾಯಿಕ ಸಂಗೀತ ಪರಂಪರೆ ಮತ್ತು ಸಿನಿಮಾ’ ಪರಿಕಲ್ಪನೆಯಲ್ಲಿ ಚಲನಚಿತ್ರೋತ್ಸವ ಆಯೋಜಿಸಲಾಗಿದೆ. ಅದರಂತೆ ಭಾರತೀಯ ಸಂಗೀತ ಲೋಕದ ದಿಗ್ಗಜರಾದ ತಾನ್ಸೇನ್, ತ್ಯಾಗರಾಜ, ಪುರಂದರ ದಾಸರು ಸೇರಿ ಇನ್ನಿತರರ ಜೀವನಾಧಾರಿತ ಚಲನಚಿತ್ರ ಮತ್ತು ಸಂಧ್ಯಾರಾಗ, ಮಲಯಮಾರುತದಂತಹ 10 ಕ್ಕೂ ಹೆಚ್ಚಿನ ಸಂಗೀತ ಆಧಾರಿತ ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿರುವುದು ಈ ಬಾರಿಯ ವಿಶೇಷ.
ಸಾಕ್ಷ್ಯಚಿತ್ರ ಪ್ರದರ್ಶನ
ಸಾಹಿತಿಗಳಾದ ಡಾ.ಎಸ್.ಎಲ್.ಭೈರಪ್ಪ, ಡಾ.ಚಂದ್ರಶೇಖರ ಕಂಬಾರ ಸೇರಿ ಇನ್ನಿತರರ ಸಾಕ್ಷ್ಯಚಿತ್ರಗಳನ್ನೂ ಪ್ರದರ್ಶಿಸಲಾಗುತ್ತಿದೆ. ಜತೆಗೆ ಚಲನಚಿತ್ರೋತ್ಸವದ ಜತೆಗೆ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಕೃತಕ ಬುದ್ಧಿಮತ್ತೆ, ವರ್ಚುವಲ್ ರಿಯಾಲಿಟಿ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಲಾಗುವುದು. ಅದಕ್ಕಾಗಿ ತಜ್ಞರನ್ನು ನೇಮಿಸಲಾಗಿದೆ. ಚಲನಚಿತ್ರ ಕಾರ್ಯಾಗಾರ, ವಿಚಾರ ಸಂಕಿರಣ, ಮಾಸ್ಟರ್ ಕ್ಲಾಸ್ಗಳು ನಡೆಯಲಿವೆ ಎಂದು ಪುರಾಣಿಕ್ ತಿಳಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ, ಜಂಟಿ ಕಾರ್ಯದರ್ಶಿ ಎಚ್.ಬಿ. ದಿನೇಶ್, ಚಲನಚಿತ್ರ ಅಕಾಡೆಮಿ ರಿಜಿಸ್ಟಾರ್ ಜಿ.ಹಿಮಂತರಾಜು, ಕಲಾತ್ಮಕ ನಿರ್ದೇಶಕ ಎನ್.ವಿದ್ಯಾಶಂಕರ್ ಇನ್ನಿತರರಿದ್ದರು.