ಮರ್ಡರ್ ಮಿಸ್ಟ್ರಿ ಕಥೆ ಹೇಳ್ತಾರಂತೆ ವಸಿಷ್ಠ ಬಂಟನೂರು!

1975 - Final
Published on

ಬೆಂಗಳೂರು: ಒಂದು ಹಳೆಯ ಸ್ಕೂಟರ್​, ಅದರ ಕೆಳಗೆ 1975 ... ಈ ಪೋಸ್ಟರ್​ ನೋಡಿದರೆ, 75ರ ಕಾಲಘಟ್ಟದಲ್ಲಿ ನಡೆಯುವ ಒಂದು ಲವ್​ಸ್ಟೋರಿ ಎಂದನಿಸಬಹುದು. ಆದರೆ, ಇದೊಂದು ಮರ್ಡರ್ ಮಿಸ್ಟ್ರಿ ಎನ್ನುತ್ತಾರೆ ವಸಿಷ್ಠ ಬಂಟನೂರು. ಈ ಹಿಂದೆ, 'ಒನ್ ಲವ್ ೨ ಸ್ಟೋರಿ' ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಅವರು, ಲಾಕ್​ಡೌನ್​ ಸಮಯದಲ್ಲಿ ಒಂದು ಹೊಸ ಕಥೆ ಮಾಡಿಟ್ಟುಕೊಂಡಿದ್ದು, ಇತ್ತೀಚೆಗೆ ಹಬ್ಬದ ಸಂದರ್ಭದಲ್ಲಿ ಆ ಚಿತ್ರದ ಮುಹೂರ್ತವೂ ಮುಗಿದಿದೆ.

ವಸಿಷ್ಠ ಈ ಬಾರಿ ಪ್ರಯೋಗಾತ್ಮಕ ಅಂಶಗಳನ್ನೊಳಗೊಂಡಿರುವ, ಹಲವಾರು ಕೌತುಕಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಮರ್ಡರ್ ಮಿಸ್ಟ್ರಿಯ ಹಾದಿ ಹಿಡಿದಿದ್ದಾರೆ. ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಅಕ್ಟೋಬರ್​ನಿಂದ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

ಕಥೆಯ ಬಗ್ಗೆ ಯಾವ ಸುಳಿವನ್ನೂ ಬಿಟ್ಟುಕೊಡದಂತೆ ವಸಿಷ್ಠ ಬಂಟನೂರು ಎಚ್ಚರ ವಹಿಸಿದ್ದಾರೆ. ಈ ಚಿತ್ರದ ಕಥೆ ಒಂದು ಸ್ಕೂಟರ್ ಸುತ್ತುತ್ತದೆ ಎಂಬ ಮಾಹಿತಿಯನ್ನು ಮಾತ್ರ ಬಿಟ್ಟುಕೊಡುವ ಅವರು, ಆ ಸ್ಕೂಟರ್ ಸಹ ಕಥೆಯಲ್ಲೊಂದು ಪಾತ್ರವಾಗಿರುತ್ತದೆ ಎಂದು ಹೇಳಲು ಮರೆಯುವುದಿಲ್ಲ. ಇನ್ನುಳಿದಂತೆ, ಜೆಮ್ ಶೆಟ್ಟಿ ಮತ್ತು ಆರೋಹಿ ನಾಯಕ-ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಸಿಲ್ವರ್ ಸ್ಕ್ರೀನ್ಸ್ ಫಿಲಂ ಫ್ಯಾಕ್ಟರಿ ಬ್ಯಾನರಿನಡಿ ಈ ಚಿತ್ರವನ್ನು ದಿನೇಶ್ ರಾಜನ್ ನಿರ್ಮಿಸುತ್ತಿದ್ದಾರೆ. ಬೆಂಗಳೂರು, ಬೀದರ್, ಮಂಗಳೂರು ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಸದ್ಯ ಪಾತ್ರವರ್ಗ ಮತ್ತು ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದ್ದು, ಸದ್ಯದಲ್ಲೇ ಇನ್ನಷ್ಟು ಮಾಹಿತಿ ಹೊರಬೀಳಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net