ಅ.1ರಿಂದ ಶೇ100ರಷ್ಟು ಹಾಜರಾತಿ?; ಸದ್ಯದಲ್ಲೇ ಅಧಿಕೃತ ಘೋಷಣೆ ಸಾಧ್ಯತೆ ...

Producers
Published on

ರಾಜ್ಯದ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಹಾಜರಾತಿಗೆ ಚಿತ್ರಪ್ರದರ್ಶನ ಮಾಡಬಹುದು ಎಂದು ರಾಜ್ಯ ಸರ್ಕಾರ ಅನುಮತಿ ಕೊಟ್ಟು ಎರಡು ತಿಂಗಳೇ ಆಗಿವೆ. ಕರೊನಾ ಕೇಸ್​ಗಳ ಸಂಖ್ಯೆ ಕಡಿಮೆಯಾಗುತ್ತಿರವುದರಿಂದ, ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಬೇಕು ಎಂದು ಚಿತ್ರರಂಗದವರು ಮನವಿ ಸಲ್ಲಿಸುತ್ತಲೇ ಇದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಅಕ್ಟೋಬರ್ ಒಂದಿರಂದ ರಾಜ್ಯದ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಚಿತ್ರಪ್ರದರ್ಶನವಾಗುವ ಸಾಧ್ಯತೆ ಇದೆ. ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಬರಬೇಕೆಂದರೆ, ದೊಡ್ಡ ಚಿತ್ರಗಳು ಬಿಡುಗಡೆಯಾಗಬೇಕು. ದೊಡ್ಡ ಚಿತ್ರಗಳು ಬಿಡುಗಡೆ ಆಗಬೇಕಾದರೆ ಮತ್ತು ಚಿತ್ರರಂಗ ಮುಂಚಿನ ಸ್ಥಿತಿಗೆ ಬರಬೇಕೆಂದರೆ ಶೇ. 100ರಷ್ಟು ಆಸನ ವ್ಯವಸ್ಥೆಗೆ ಅನುಮತಿ ಕೊಡಬೇಕು ಎಂಬ ಅಭಿಪ್ರಾಯ ಇದೆ.

ಈ ನಿಟ್ಟಿನಲ್ಲಿ, ಕನ್ನಡ ಚಿತ್ರರಂಗದ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇತರೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಮಂಗಳವಾರ ಸಹ ನಿರ್ವಪಕರಾದ ಜಯಣ್ಣ, ಸೂರಪ್ಪ ಬಾಬು ಮತ್ತು ಕೆ.ಪಿ. ಶ್ರೀಕಾಂತ್, ಆರೋಗ್ಯ ಸಚಿವ ಕೆ. ಸುಧಾಕರ್ ಅವರನ್ನು ಭೇಟಿ ಮಾಡಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ಕೋರಿದ್ದಾರೆ. ಇದಕ್ಕೆ ಸೂಕ್ತ ಸ್ಪಂದನೆ ಸಿಕ್ಕಿದ್ದು, ಅ.1ರಿಂದ ಜಾರಿಗೆ ಬರುವಂತೆ ಶೇ. 100ರಷ್ಟು ಆಸನ ಭರ್ತಿಗೆ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಎರಡ್ಮೂರು ದಿನಗಳಲ್ಲಿ ಸರ್ಕಾರಿ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಅ.1ರಿಂದ ಶೇ. 100ರಷ್ಟು ಆಸನ ವ್ಯವಸ್ಥೆಗೆ ಅನುಮತಿ ಸಿಕ್ಕರೆ, ಇಷ್ಟು ದಿನ ಬಿಡುಗಡೆಗಾಗಿ ಕಾದಿದ್ದ ದೊಡ್ಡ ಮತ್ತು ನಿರೀಕ್ಷಿತ ಚಿತ್ರಗಳು ಒಂದರ ಹಿಂದೊಂದು ಬಿಡುಗಡೆಯಾಗಲಿದೆ. ಈ ಸಾಲಿನಲ್ಲಿ, ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಮೊದಲಿದ್ದು, ಅದಾಗಿ ಒಂದು ತಿಂಗಳ ಅಂತದಲ್ಲಿ ‘ಭಜರಂಗಿ 2’ ಮತ್ತು ‘ಸಲಗ’ ಚಿತ್ರಗಳು ಬಿಡುಗಡೆಯಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net