

‘ರಾಧೇ ಶ್ಯಾಮ್ ಚಿತ್ರದಲ್ಲಿ ಪೂಜಾ ಹೆಗ್ಡೆ ಅಭಿನಯದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದವು. ಆದರೆ, ಚಿತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ವಿಜಯ್ ಅಭಿನಯದ ‘ಬೀಸ್ಟ್’ ಸಹ ಇದೇ ಹಾದಿ ಹಿಡಿಯಿತು. ಹಾಗಂತ ಪೂಜಾಗೆ ಒಂದಿಷ್ಟೂ ಬೇಡಿಕೆ ಕಡಿಮೆಯಾಗಿಲ್ಲ. ಚಿತ್ರ ಗೆಲ್ಲಲಿ, ಸೋಲಲಿ ಟಾಲಿವುಡ್ನ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಪೂಜಾ ಹೆಗ್ಡೆ ಸಹ ಒಬ್ಬರು.
ಈಗ್ಯಾಕೆ ಈ ಮಾತು ಅಂದರೆ, ವೆಂಕಟೇಶ್ ಮತ್ತು ವರುಣ್ ತೇಜ್ ಅಭಿನಯದ ‘ಎಫ್ 2’ ಎಂಬ ಚಿತ್ರದಲ್ಲಿನ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುವುದಕ್ಕೆ ಪೂಜಾ ಹೆಗ್ಡೆಗೆ ಚಿತ್ರತಂಡ ಭರ್ಜರಿ ಆಫರ್ ನೀಡಿದೆಯಂತೆ. ಒಂದು ಚಿತ್ರದಲ್ಲಿ ಅಭಿನಯಿಸುವುದಕ್ಕಾಗಿ ಪೂಜಾ ಎರಡೂವರೆಯಿಂದ ಮೂರು ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ. ಆದರೆ, ‘ಎಫ್ 2’ ಚಿತ್ರದಲ್ಲಿನ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುವುದಕ್ಕೆಂದು ಅವರಿಗೆ 1.25 ಕೋಟಿ ರೂ. ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಈ ಹಾಡಿನ ಚಿತ್ರೀಕರಣ ಪ್ರಾರಂಭವಾಗಿದ್ದು, ಈಗಾಗಲೇ ಪೂಜಾ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರಂತೆ.
ಪೂಜಾ ಒಂದು ಹಾಡಿಗೆ ನಿಜಕ್ಕೂ ಅಷ್ಟೊಂದು ಸಂಭಾವನೆ ಪಡೆದರಾ ಎಂದು ಕೇಳಿದರೆ, ಸಂಭಾವನೆಯ ವಿಷಯ ಮಾತನಾಡುವುದಕ್ಕೆ ತಮಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ. ‘ನನಗೆ ತೆಲುಗು ಚಿತ್ರರಂಗದಲ್ಲೊಂದು ವಿಶೇಷ ಸ್ಥಾನ ಕೊಟ್ಟಿದ್ದಾರೆ. ನನಗೆ ಗೊತ್ತಿಲ್ಲದ ಭಾಷೆಯೊಂದರಲ್ಲಿ ಮಾನ್ಯತೆ ಸಿಕ್ಕಿರುವುದು ನಿಜಕ್ಕೂ ಸಂತೋಷದ ವಿಷಯ’ ಎಂದು ಹೇಳಿಕೊಂಡಿದ್ದಾರೆ.