

ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ನಟಿಸಿದ ಆ್ಯಕ್ಷನ್ ಥ್ರಿಲ್ಲರ್ ಪ್ರಕಾರದ ಚಿತ್ರ 'ತೇಜಸ್' ಅ.27 ರಂದು ಬಿಡುಗಡೆಯಾಗಿತ್ತು. ಥಿಯೇಟರ್‌ಗಳಲ್ಲಿ ಪ್ರೇಕ್ಷಕರನ್ನು ಮೆಚ್ಚಿಸದ ಈ ಚಿತ್ರ ಈಗ ಡಿಜಿಟಲ್ ವೇದಿಕೆಯಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಸಿದ್ಧವಾಗಿದೆ.
ತೇಜಸ್ ಜನಪ್ರಿಯ ಓಟಿಟಿ ಪ್ಲಾಟ್‌ಫಾರ್ಮ್ ಜೀ5 ನಲ್ಲಿ ಜ.5 ರಂದು ಪ್ರಥಮ ಪ್ರದರ್ಶನಗೊಳ್ಳಲಿದೆ. ಒಟಿಟಿಯಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ರೋನಿ ಸ್ಕ್ರೂವಾಲಾ ನಿರ್ಮಿಸಿರುವ ಈ ಚಿತ್ರದಲ್ಲಿ ಅಂಶುಲ್ ಚೌಹಾಣ್ ಮತ್ತು ವರುಣ್ ಮಿತ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಕಂಗನಾ ರಣಾವತ್ ಎಮರ್ಜೆನ್ಸಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕಂಗನಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾಗಾಂಧಿ ವಿರುದ್ಧ ಸೆಟೆದು ನಿಂತಿದ್ದ ಹಿರಿಯ ರಾಜಕಾರಣಿ ಜಯಪ್ರಕಾಶ್ ನಾರಾಯಣ್ (ಜೆಪಿ) ಪಾತ್ರದಲ್ಲಿ ಬಾಲಿವುಡ್ ನಿರ್ದೇಶಕ ಅನುಪಮ್ ಖೇರ್ ನಟಿಸುತ್ತಿದ್ದಾರೆ.
ಶ್ರೇಯಸ್ ತಲ್ಪಾಡೆ, ಭೂಮಿಕಾ ಚಾವ್ಲಾ ಮತ್ತು ಇತರ ನಟರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಇದನ್ನು ಹೋಮ್ ಬ್ಯಾನರ್ ಮಣಿ ಕಾರ್ನಿಕಾ ಫಿಲಂಸ್ ಅಡಿಯಲ್ಲಿ ರೇಣು ಪಿಟ್ಟಿ ಮತ್ತು ಕಂಗನಾ ಜಂಟಿಯಾಗಿ ನಿರ್ಮಿಸಿದ್ದಾರೆ. ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡುತ್ತಿದ್ದಾರೆ. ಮತ್ತೊಂದೆಡೆ, ಕಂಗನಾ ಹಿಂದಿ ಮತ್ತು ತಮಿಳು ದ್ವಿಭಾಷಾ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ.