ಚೀನಾ ವೈರಸ್ ಅಲರ್ಟ್; ಕರ್ನಾಟಕ ಸೇರಿದಂತೆ ಐದು ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ

Pneumonia
Published on

ನವದೆಹಲಿ/ಬೆಂಗಳೂರು: ಚೀನಾದ ಮಕ್ಕಳಲ್ಲಿ ಉಸಿರಾಟ ಸಂಬಂಧಿ ಕಾಯಿಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನಗಳಿಗೆ ಅನುಗುಣವಾಗಿ ಕರ್ನಾಟಕ ಸಹಿತ ಐದು ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆರೋಗ್ಯ ವ್ಯವಸ್ಥೆಗಳನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.

ಕರ್ನಾಟಕ, ರಾಜಸ್ಥಾನ, ಗುಜರಾತ್, ಉತ್ತರಾಖಂಡ ಮತ್ತು ತಮಿಳುನಾಡು ರಾಜ್ಯಗಳು ಉಸಿರಾಟದ ಸಮಸ್ಯೆಗಳನ್ನು ನಿರ್ವಹಿಸಲು ತಯಾರಾಗಿರುವಂತೆ ಆಸ್ಪತ್ರೆಗಳು ಮತ್ತು ಆರೋಗ್ಯಸೇವಾ ಸಿಬ್ಬಂದಿಗೆ ನಿರ್ದೇಶನ ನೀಡಿವೆ. ಕರೊನಾ ನಿಯಂತ್ರಣಕ್ಕೆ ಹೊರಡಿಸಲಾದ ಪರಿಷ್ಕೃತ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ಕರೊನಾ ಸಂದರ್ಭದಲ್ಲಿ ಆದ ತಪು್ಪಗಳು ಪುನರಾವರ್ತನೆ ಆಗಬಾರದೆಂಬ ಕಾರಣಕ್ಕೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ. ರಾಜ್ಯದಲ್ಲಿ ಶೀತಜ್ವರ (ಐಎಲ್​ಐ), ಉಸಿರಾಟದ ಸಮಸ್ಯೆ(ಸಾರಿ) ಪ್ರಕರಣಗಳು ಉಲ್ಬಣಿಸಿಲ್ಲ.

ಹೀಗಾಗಿ ಸದ್ಯಕ್ಕಂತೂ ಆತಂಕಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ವಹಿಸಬೇಕಿದೆ ಎಂದು ಸರ್ಕಾರ ರಚಿಸಿರುವ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ವಿಜಯವಾಣಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದೀರ್ಘಾವಧಿ ಹಾಗೂ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಆದ್ಯತೆ ಮೇಲೆ ಮುನ್ನೆಚ್ಚರಿಕೆ ವಹಿಸಬೇಕು. ಜನದಟ್ಟಣೆ ಹಾಗೂ ಶೀತ ಪ್ರದೇಶಕ್ಕೆ ಭೇಟಿ ನೀಡುವುದನ್ನು ನಿಯಂತ್ರಿಸುವುದು ಮತ್ತು ಮಕ್ಕಳು, ವೃದ್ಧರು, ಗರ್ಭಿಣಿಯರು ಸಹ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಆರೋಗ್ಯ ಇಲಾಖೆ ಸ್ಪಷ್ಟ ಎಚ್ಚರಿಕೆ ನೀಡಿದೆ.

ಬುಧವಾರ ಆರೋಗ್ಯ ಸಚಿವರು ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಸೂಚನೆ ನೀಡಲಾಗಿದೆ. ಇನ್ನೊಂದೆಡೆ ಕೇಂದ್ರದ ಅಧಿಕಾರಿಗಳು ವಿಡಿಯೋ ಕಾನ್ಪರೆನ್ಸ್ ಮೂಲಕ ರಾಜ್ಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಬೆಳವಣಿಗೆ ಕುರಿತು ಮಾಹಿತಿ ಹಂಚಿಕೊಂಡ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಚೀನಾ ವೈರಸ್ ಬಗ್ಗೆ ಸಾರ್ವಜನಿಕರು ಆತಂಕಪಡುವುದು ಬೇಡ. ಸರ್ಕಾರ ಈ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಸಾಧಾರಣವಾಗಿ ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಚಳಿಗಾಲದ ಕಾರಣಕ್ಕಾಗಿ ಉಸಿರಾಟದ ಸಮಸ್ಯೆ ಪ್ರಕರಣಗಳು ವರದಿಯಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ, ಇದನ್ನು ಚೀನಾ ವೈರಸ್​ಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದರು.

ಎಚ್ಚರಿಕೆ ಕ್ರಮಗಳೇನು?: ಚೀನಾ ವೈರಸ್ ಹಿನ್ನೆಲೆಯಲ್ಲಿ: ಆರೋಗ್ಯ ಇಲಾಖೆ ಆಸ್ಪತ್ರೆಗಳು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸಾರ್ವ ಜನಿಕರು ಮುಖ್ಯವಾಗಿ ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿಶ್ಯುವಿನಿಂದ ಮುಚ್ಚಿಕೊಳ್ಳಬೇಕು, ಸಾಬೂನು ಮತ್ತು ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳಬೇಕು, ಕೈಗಳಿಂದ ಕಣ್ಣು, ಮೂಗು ಅಥವಾ ಬಾಯಿಯನ್ನು ಅನಗತ್ಯವಾಗಿ ಮುಟ್ಟಿಕೊಳ್ಳಬಾರದು, ಜನ ದಟ್ಟಣೆ ಇರುವ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ ಮತ್ತು ಅಂತಹ ಸ್ಥಳಗಳಿಗೆ ಭೇಟಿ ನೀಡಿದರೆ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಜ್ವರಪೀಡಿತ ವ್ಯಕ್ತಿಯಿಂದ ಕನಿಷ್ಠ ಅಂತರ ಕಾಪಾಡಿಕೊಳ್ಳಬೇಕು. ಸಮರ್ಪಕ ವಾಗಿ ನಿದ್ರೆ ಮಾಡಿ, ದೈಹಿಕವಾಗಿ ಕ್ರಿಯಾಶೀಲರಾಗಿ ಮತ್ತು ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕು, ಸಾಕಷ್ಟು ನೀರು ಕುಡಿಯಬೇಕು, ಪೌಷ್ಟಿಕ ಆಹಾರವನ್ನು ಸೇವಿಸಬೇಕು ಎಂದು ಸಲಹೆ ನೀಡಲಾಗಿದೆ. ಸಾರ್ವಜನಿಕವಾಗಿ ಉಗುಳುವುದು, ಸೀನುವುದು ಮಾಡಬಾರದು. ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷಿಸದೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬ ಅಂಶ ಮಾರ್ಗಸೂಚಿಯಲ್ಲಿದೆ.

ಮಾಸ್ಕ್ ಕಡ್ಡಾಯ: ಆಸ್ಪತ್ರೆಯಲ್ಲಿ ವರದಿಯಾಗುವ ಶೀತಜ್ವರ (ಐಎಲ್​ಐ) ಮತ್ತು ಉಸಿರಾಟದ ತೊಂದರೆ (ಸಾರಿ) ಪ್ರಕರಣಗಳ ಕುರಿತು ಐಡಿಎಸ್​ಪಿ-ಐಎಚ್​ಐಪಿ ಪೋರ್ಟಲ್​ನಲ್ಲಿ ದಾಖಲಿಸುವಂತೆ ತಿಳಿಸಲಾಗಿದೆ. ಅಗತ್ಯ ಔಷಧಗಳ ದಾಸ್ತಾನು ಮಾಡಿಕೊಳ್ಳುವಂತೆ ಮತ್ತು ಎಲ್ಲ ಆರೋಗ್ಯ ಸೇವೆಗಳಲ್ಲಿ ಆರೋಗ್ಯ ಕಾರ್ಯಕರ್ತರನ್ನು ಬಳಸಿಕೊಳ್ಳುವಂತೆ, ವೈದ್ಯರು, ಶುಶ್ರೂಷಕರು ಸೇರಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲು ನಿರ್ಧರಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಕೋವಿಡ್ ಪ್ರಕರಣಗಳನ್ನು ನಿರ್ವಹಿಸಲು ಗೊತ್ತುಪಡಿಸಿದ ಎಲ್ಲ ಆಸ್ಪತ್ರೆಗಳು ತಕ್ಷಣವೇ ವೈದ್ಯಕೀಯ ಮೂಲಸೌಕರ್ಯ, ವೈದ್ಯಕೀಯ ಮತ್ತು ಅರೆವೈದ್ಯಕೀಯ ಮಾನವಶಕ್ತಿ, ಆಮ್ಲಜನಕ ಹಾಸಿಗೆಗಳು, ಪ್ರತ್ಯೇಕ ಹಾಸಿಗೆಗಳು, ವೆಂಟಿಲೇಟರ್​ಗಳು, ಪಿಎಸ್​ಎ ಪ್ಲಾಂಟ್​ಗಳು, ಎಲ್​ಎಂಒ ಪ್ಲಾಂಟ್​ಗಳ ಸಂಪನ್ಮೂಲಗಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಿಳಿಸಲಾಗಿದೆ.

ಆಮ್ಲಜನಕ ಸಿಲಿಂಡರ್​ಗಳು, ಔಷಧಗಳು, ಪಿಪಿಇ ಕಿಟ್ಗಳು, ಪರೀಕ್ಷಾ ಕಿಟ್​ಗಳು ಮತ್ತು ಲ್ಯಾಬ್ ಸೌಲಭ್ಯಗಳು, ಆಂಬ್ಯುಲೆನ್ಸ್ ಸೇರಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳು ವಂತೆಯೂ ಸೂಚಿಸಲು ಸಭೆಯಲ್ಲಿ ತಿಳಿಸಲಾಗಿದೆ. ಕೋವಿಡ್, ಇನ್ಪೂಯೇನ್ಝಾ ವೈರಸ್, ಅಡೆನೋ ವೈರಸ್ ಸೇರಿ ಯಾವುದೇ ಸೋಂಕು ಮಾದರಿಗಳನ್ನು ಹತ್ತಿರದ ಪ್ರಯೋಗಾಲಯಗಳಿಗೆ ಕಳುಹಿಸಬೇಕು ಹಾಗೂ ರಾಜ್ಯದ ಎಲ್ಲ ವೈರಾಣು ಸಂಶೋಧನೆ ಮತ್ತು ರೋಗಪತ್ತೆ ಪ್ರಯೋಗಾಲಯಗಳು ಐಎಚ್​ಐಪಿ ಪೋರ್ಟಲ್​ನಲ್ಲಿ ಪರೀಕ್ಷಾ ವರದಿ ದಾಖಲಿಸಲು ಸೂಚಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮಗಳು

  • ನಿಯಮಿತವಾಗಿ ಕೈಗಳನ್ನು ತೊಳೆಯಿರಿ
  • ಮಾಸ್ಕ್ ಸರಿಯಾಗಿ ಬಳಸಿ
  • ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕ ತಪ್ಪಿಸಿ
  • ನಿಮ್ಮ ಸುತ್ತಲೂ ಶುದ್ಧ, ಉತ್ತಮ ವಾತಾವರಣ ಇರಲಿ
  • ಪರೀಕ್ಷೆ ಮಾಡಿಕೊಂಡು, ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ.
  • ಅನಾರೋಗ್ಯದಿಂದ ಬಳಲುತ್ತಿದ್ದರೆ, ರೋಗಲಕ್ಷಣಗಳನ್ನು ಹೊಂದಿದ್ದರೆ ಮನೆಯಲ್ಲೇ ಇರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net