

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕರೊನಾ ವೈರಸ್ಗೆ ಚೀನಿ ವೈರಸ್, ವುಹಾನ್ ವೈರಸ್ ಎಂದೇ ಕರೆದಿದ್ದಾರೆ. ಕರೊನಾ ವೈರಸ್ ಹುಟ್ಟಿದ್ದು ಚೀನಾದಲ್ಲಿ ಅಲ್ಲ, ಅದನ್ನು ಅಮೆರಿಕ ಸೇನೆ ತಂದು ಹಾಕಿದೆ ಎಂದು ಚೀನಾ ಆರೋಪ ಮಾಡಿತ್ತು. ಇದರಿಂದ ಕೆಂಡಾಮಂಡಲರಾಗಿದ್ದ ಟ್ರಂಪ್, ಕರೊನಾ ವೈರಸ್ಗೆ ಚೀನಾ ವೈರಸ್ ಎಂದೇ ಹೆಸರಿಟ್ಟಿದ್ದಾರೆ.
ಈ ಕರೊನಾ ವಿಚಾರದಲ್ಲಿ ಇಡೀ ಜಗತ್ತೇ ಚೀನಾವನ್ನು ದೂಷಿಸುತ್ತಿದೆ. ಇದರಿಂದ ಮುಜುಗರ ಅನುಭವಿಸುತ್ತಿರುವ ಚೀನಾ, ಮಂಗಳವಾರ ಭಾರತದ ಬಳಿ ಮನವಿಯೊಂದನ್ನು ಮಾಡಿಕೊಂಡಿದೆ.
ಕರೊನಾ ವೈರಸ್ ಹೆಸರು ಉಲ್ಲೇಖಿಸುವಾಗ ದಯವಿಟ್ಟು ಚೀನಾ ಹೆಸರನ್ನು ಹೇಳಬೇಡಿ. ಚೀನಿ ವೈರಸ್ ಎಂದು ಒತ್ತಿ ಹೇಳಿದರೆ ಅದು ನಮ್ಮ ದೇಶಕ್ಕೆ ಕಳಂಕ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮಗೆ ಕೆಟ್ಟ ಹೆಸರು. ಉಳಿದ ದೇಶಗಳೊಂದಿಗಿನ ನಮ್ಮ ಸಂಬಂಧ, ವ್ಯವಹಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೇಳಿದೆ.
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಭಾರತದ ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಅವರ ಬಳಿ ಈ ಬಗ್ಗೆ ಮನವಿ ಮಾಡಿದಾಗ ಅವರೂ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಕರೊನಾ ವೈರಸ್ಗೆ ಚೀನಿ ವೈರಸ್ ಎಂದು ಕರೆಯುವಷ್ಟು ಸಂಕುಚಿತ ಮನೋಭಾವ ಭಾರತಕ್ಕೆ ಇಲ್ಲ ಎಂದು ಭಾವಿಸುತ್ತೇನೆ ಎಂದು ಚೀನಾದ ವಾಂಗ್ ಯಿ ತಿಳಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಜೈಶಂಕರ್ ಕರೊನಾ ವಿರುದ್ಧ ಹೋರಾಟಕ್ಕೆ ಎರಡೂ ದೇಶಗಳು ಒಗ್ಗಟ್ಟಾಗುವ ಮಾತುಗಳನ್ನಾಡಿದ್ದಾರೆ. (ಏಜೆನ್ಸೀಸ್)