

ನವದೆಹಲಿ: ವಿಸ್ತರಣಾವಾದಿ ಮನೋಭಾವದ ಚೀನಾ ಲಡಾಖ್ನ ಪೂರ್ವಭಾಗದಲ್ಲಿ ಹೇಗಾದರೂ ಮಾಡಿ ಭಾರತದ ಭೂಮಿಯನ್ನು ಕಬಳಿಸಲೇಬೇಕು ಎಂದು ಹುನ್ನಾರ ನಡೆಸುತ್ತಿದೆ. ಇದಕ್ಕಾಗಿ ಅದು ಭೂತಾನ್ನೊಂದಿಗಿನ ಗಡಿ ವಿವಾದದ ಕಿಡಿ ಹೊತ್ತಿಸುವ ಮೂಲಕ ಭಾರತದ ಮೇಲೆ ಒತ್ತಡ ಹೇರುವ ತಂತ್ರವನ್ನೂ ಅನುಸರಿಸಿತ್ತು. ಆದರೆ, ಅದರ ಈ ಪ್ರಯತ್ನ ಅದಕ್ಕೇ ತಿರುಗುಬಾಣವಾಗಿದೆ.
2017ರ ಡೋಕ್ಲಾಂ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಮತ್ತು ಚೀನಾದ ನಡುವೆ ಸ್ಯಾಂಡ್ವಿಚ್ನಂತೆ ಕುಳಿತಿರುವ ಭೂತಾನ್ ಒಂದು ಹಂತದಲ್ಲಿ ಭಾರತ ಮತ್ತು ಚೀನಾದೊಂದಿಗೆ ಸಮಾನ ಮಿತ್ರತ್ವ ಕಾಯ್ದುಕೊಳ್ಳಲು ನಿರ್ಧರಿಸಿತ್ತು. ಆದರೆ, ಚೀನಾದ ವಿಸ್ತರಣಾವಾದಿ ಮನೋಭಾವ ಹಾಗೂ ತನ್ನ ಅತ್ಯಮೂಲ್ಯವಾದ ರಾಷ್ಟ್ರೀಯ ಅಭಯಾರಣ್ಯವನ್ನು ಕಬಳಿಸಲು ನಡೆಸುತ್ತಿರುವ ಹುನ್ನಾರವನ್ನು ಮನಗಂಡ ನಂತರದಲ್ಲಿ ಭಾರತದೊಂದಿಗೆ ಹೆಚ್ಚಿನ ಸ್ನೇಹ ಹೊಂದುವುದೇ ಸುರಕ್ಷಿತ ಎಂದು ಭೂತಾನ್ ಭಾವಿಸಿದೆ. ಈ ಹಿನ್ನೆಲೆಯಲ್ಲಿ ಅದು ಭಾರತಕ್ಕೆ ಮತ್ತಷ್ಟು ಸನಿಹವಾಗುವ ಪ್ರಯತ್ನಗಳಿಗೆ ಚಾಲನೆ ನೀಡಿದೆ.
ಅಮೆರಿಕ ಮೂಲದ ಬಹುರಾಷ್ಟ್ರೀಯ ನಿಧಿ, ಜಾಗತಿಕ ಪರಿಸರ ಸೌಲಭ್ಯದ ಜೂನ್ ತಿಂಗಳ ಸಭೆಯಲ್ಲಿ ತನ್ನ ಸಕ್ಟೆಂಗ್ ವನ್ಯಜೀವಿ ಅಭಯಾರಣ್ಯವನ್ನು ಅಭಿವೃದ್ಧಿಪಡಿಸಲು ಭೂತಾನ್ ಕೇಳಿದ್ದ ಧನಸಹಾಯ ಕೊಡಲು ಚೀನಾ ತಿರಸ್ಕರಿಸಿತ್ತು. ಅಭಯಾರಣ್ಯದ 650 ಚದರ ಕಿ.ಮೀ. ಪ್ರದೇಶದ ಬಗ್ಗೆ ಚೀನಾ ಮತ್ತು ಭೂತಾನ್ ನಡುವೆ ವಿವಾದ ಇರುವುದರಿಂದ ಅಭಯಾರಣ್ಯದ ಅಭಿವೃದ್ಧಿ ಹಣ ಕೊಡಲು ಸಾಧ್ಯವಿಲ್ಲ ಎಂದು ಚೀನಾದ ಪ್ರತಿನಿಧಿ ಮುಖಕ್ಕೆ ಹೊಡೆದಂತೆ ಹೇಳಿದ್ದರು. ಇದು ಭೂತಾನ್ ಅನ್ನು ಕರೆಳಿಸಿ, ಭಾರತಕ್ಕೆ ಮತ್ತಷ್ಟು ಸನಿಹವಾಗುವಂತೆ ಭೂತಾನ್ಗೆ ಪ್ರೇರೇಪಣೆ ಒದಗಿಸಿತು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಭಾರತದಲ್ಲಿರುವ ತಮ್ಮ ರಾಯಭಾರ ಕಚೇರಿ ಮೂಲಕ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದ ಭೂತಾನ್ನ ಅಧಿಕಾರಿಗಳು, ತಮ್ಮ ಭೂಮಿಯನ್ನು ಅತಿಕ್ರಮಿಸಲು ಚೀನಾ ನಡೆಸುತ್ತಿರುವ ಹುನ್ನಾರವನ್ನು ಖಂಡಿಸಿದ್ದರು. ಯಾವುದೇ ಗಡಿ ವಿವಾದದ ಬಗ್ಗೆ ಈ ಕುರಿತು ನಡೆಯುವ ಮುಂದಿನ ಸುತ್ತಿನ ಸಭೆಯಲ್ಲಿ ಚರ್ಚಿಸೋಣ ಎಂದು ಸ್ವಲ್ಪ ಖಾರವಾಗಿಯೇ ಭೂತಾನ್ ಪ್ರತಿಕ್ರಿಯಿಸಿತ್ತು.
ಭೂತಾನ್ ಮತ್ತು ಚೀನಾ ನಡುವೆ ಗಡಿ ವಿವಾದ ಇದ್ದು, 1984ರಿಂದ ಇದುವರೆಗೆ 24 ಸುತ್ತಿನ ಮಾತುಕತೆಗಳು ನಡೆದಿವೆ. ಡೋಕ್ಲಾಂ, ಸಿನ್ಚುಲುಂಗ್, ಡ್ರಮನ ಮತ್ತು ಶಾಕಟೋdಲ್ಲಿರುವ 269 ಚದರ ಕಿ.ಮೀ. ಪ್ರದೇಶವನ್ನು ತನಗೆ ಬಿಟ್ಟುಕೊಟ್ಟರೆ, ಪಸಾಮ್ಲುಂಗ್ ಮತ್ತು ಜಾಖರ್ಲುಂಗ್ ಕಣಿವೆಗಳನ್ನು ಭೂತಾನ್ಗೆ ಬಿಟ್ಟುಕೊಡುವುದಾಗಿ ಹೇಳುತ್ತಿದೆ.
ಭೂತಾನ್ ಮತ್ತು ಚೀನಾ ನಡುವೆ 764 ಚದರ ಕಿ.ಮೀ. ಗಡಿ ವಿವಾದವಿದೆ. ಚೀನಾ ಹೇಳುತ್ತಿರುವಂತೆ ಟ್ರಾಸಿಗಾಂಗ್ ಜಿಲ್ಲೆಯಲ್ಲಿ 650 ಚದರ ಕಿ.ಮೀ. ಪ್ರದೇಶದಲ್ಲಿ ಹಬ್ಬಿರುವ ರಾಷ್ಟ್ರೀಯ ವನ್ಯಜೀವಿ ಅಭಯಾರಣ್ಯವನ್ನು ಚೀನಾಕ್ಕೆ ಬಿಟ್ಟುಕೊಟ್ಟರೆ, ವಿವಾದವಿರುವ ಪ್ರಾಂತ್ಯಕ್ಕಿಂತಲೂ ಹೆಚ್ಚಿನ ಪ್ರದೇಶವನ್ನು ಅದಕ್ಕೆ ಬಿಟ್ಟುಕೊಟ್ಟಂತೆ ಆಗುತ್ತದೆ ಎಂಬುದು ಭೂತಾನ್ ಅಧಿಕಾರಿಗಳ ಪ್ರತಿಪಾದನೆಯಾಗಿದೆ. ಈ ಹಿನ್ನೆಲೆಯಲ್ಲಿ ಅದು ಚೀನಾದ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸುತ್ತಿದೆ.
ಇದೇ ವೇಳೆ ಭಾರತ ಅಭಯಾರಣ್ಯದ ಮೂಲಕ ರಸ್ತೆ ನಿರ್ಮಿಸಿಕೊಡಲು ಭೂತಾನ್ ಎದುರು ಪ್ರಸ್ತಾಪವಿರಿಸಿದೆ. ಈ ರಸ್ತೆ ನಿರ್ಮಾಣದಿಂದ ಭಾರತದ ಗುವಾಹಟಿ ಮತ್ತು ಅರುಣಾಚಲ ಪ್ರದೇಶದ ತವಾಂಗ್ನ ನಡುವಿನ ಅಂತರ 450 ಕಿ.ಮೀ.ನಷ್ಟು ಕಡಿಮೆಯಾಗಲಿದೆ. ಈ ಬಗ್ಗೆ ಭೂತಾನ್ಗೆ ಒಲವು ಇದ್ದು, ಅದನ್ನು ಭಾರತಕ್ಕೆ ಮತ್ತಷ್ಟು ಸಮೀಪ ತಂದಿದೆ ಎಂದು ಹೇಳಲಾಗುತ್ತಿದೆ.