

ವುಹಾನ್: ಕರೊನಾ ಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್ನಲ್ಲಿ. ಅಲ್ಲಿಂದ ಆರಂಭವಾದ ಕರೊನಾ ದಾಳಿ ವಿಶ್ವವನ್ನೇ ಆವರಿಸಿಕೊಂಡಿದೆ. ಇದುವರೆಗೂ ಕರೊನಾದಿಂದಾಗಿ ಅತಿ ಹೆಚ್ಚು ದಾಳಿಯನ್ನು ಅನುಭವಿಸಿದ ವುಹಾನ್ನಲ್ಲಿ ಕಳೆದ 24 ಗಂಟೆಗಳಲ್ಲಿ ಒಂದೇ ಒಂದು ಹೊಸ ಪ್ರಕರಣ ಪತ್ತೆಯಾಗಿಲ್ಲ. ಈ ಮೂಲಕ ಚೀನಾ ಕರೊನಾ ಮುಕ್ತವಾಗುತ್ತಿದೆ ಎನ್ನುವುದು ಬೆಳಕಿಗೆ ಬಂದಿದೆ.
ಕಳೆದ ಕೆಲ ದಿನಗಳ ಹಿಂದೆ ವುಹಾನ್ನಲ್ಲಿ ಪ್ರತಿ ದಿನ ಸಾವಿರಾರು ಜನರಲ್ಲಿ ಕರೊನಾ ವೈರಸ್ ಪತ್ತೆಯಾಗುತ್ತಿತ್ತು. ನೂರಾರು ಜನರು ಸಾವನ್ನಪ್ಪುತ್ತಿದ್ದರು. ಅಲ್ಲಿದ್ದ ಆಸ್ಪತ್ರೆಗಳು ಸಾಲದೆ ಅನೇಕ ತಾತ್ಕಾಲಿಕ ಆಸ್ಪತ್ರೆಗಳನ್ನು ಸಹ ನಿರ್ಮಿಸಲಾಗಿತ್ತು. ಆದರೆ ಇದೀಗ ಅದೇ ವುಹಾನ್ನಲ್ಲಿ ಒಂದೇ ಒಂದು ನೂತನ ಕರೊನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ. ಡಿಸೆಂಬರ್ನಲ್ಲಿ ವೈರಸ್ ಪತ್ತೆಯಾದಾಗಿನಿಂದ ಇದೇ ಮೊದಲ ದಿನ ವುಹಾನ್ನಲ್ಲಿ ನೂತನ ಪ್ರಕರಣ ಪತ್ತೆಗಾಗದಿರುವುದು.
ವುಹಾನ್ ನಿವಾಸಿಗಳಲ್ಲಿ ನೂತನ ಪ್ರಕರಣಗಳು ಪತ್ತೆಯಾಗುತ್ತಿಲ್ಲ. ಆದರೆ ಚೀನಾದ ಅನೇಕ ಸ್ಥಳಗಳು ಮತ್ತು ಬೇರೆ ಬೇರೆ ದೇಶಗಳಿಂದ ವುಹಾನ್ಗೆ ಬರುತ್ತಿರುವವಲ್ಲಿ ಮಾತ್ರ ಕರೊನಾ ಪತ್ತೆಯಾಗುತ್ತಿದೆ. ಬುಧವಾರದಂದು ವುಹಾನ್ಗೆ ಬಂದ 34 ಜನರಲ್ಲಿ ಕರೊನಾ ಇರುವುದು ಧೃಡವಾಗಿದೆ. ಇದುವರೆಗೆ ವುಹಾನ್ಗೆ ಬಂದಿರುವವರಲ್ಲಿ ಒಟ್ಟು 189 ಜನರಲ್ಲಿ ಕರೊನಾ ಪತ್ತೆಯಾಗಿದೆ. ಅದನ್ನು ಸಹ ನಿಯಂತ್ರಣಕ್ಕೆ ತರಲು ಅಲ್ಲಿನ ಸರ್ಕಾರ ಸಕಲ ಕ್ರಮಗಳನ್ನು ತೆಗೆದುಕೊಂಡಿದೆ. (ಏಜೆನ್ಸೀಸ್)