More

  ಮತ್ತೆ ಭೀತಿ ಹುಟ್ಟಿಸಿದ ಚೀನಾ

  ಮೂರು ವರ್ಷಗಳ ಹಿಂದೆ ಕೋವಿಡ್​ನಂತಹ ಜಾಗತಿಕ ಜಾಡ್ಯಕ್ಕೆ ಚೀನಾ ಕಾರಣವಾಗಿದ್ದನ್ನು ಜಗತ್ತಿನ ಎಲ್ಲ ರಾಷ್ಟ್ರಗಳು ನೋಡಿವೆ ಮತ್ತು ಅದರ ಕಷ್ಟಕಾರ್ಪಣ್ಯಗಳನ್ನು ಸ್ವತಃ ಅನುಭವಿಸಿವೆ. ಆದರೆ ಈಗಲೂ ಚೀನಾ ಬಗೆಗಿನ ಭಯ ಹೋಗಿಲ್ಲ. ಅಲ್ಲಿನ ಜನರಿಗೆ ಏನಾದರೂ ಸಾಮೂಹಿಕ ಆರೋಗ್ಯ ಸಮಸ್ಯೆ ಉಂಟಾದರೆ ಎಲ್ಲ ದೇಶಗಳು ಎದ್ದು ಕುಳಿತುಕೊಳ್ಳುತ್ತವೆ. ಈಗಿನದು ಅಂಥದೇ ಒಂದು ಸಂದರ್ಭ.

  ಚೀನಾದಲ್ಲಿ ಈಗ ಮತ್ತೊಂದು ರೀತಿಯ ಕಾಯಿಲೆ ಹರಡಿದೆ. ಅಲ್ಲಿನ ಮಕ್ಕಳಲ್ಲಿ ಉಸಿರಾಟ ಸಂಬಂಧಿ ತೊಂದರೆಗಳು ಹೆಚ್ಚುತ್ತಿವೆ. ಸಾವಿರಾರು ಮಕ್ಕಳು ಆಸ್ಪತ್ರೆಗೆ ದಾಖಲಾಗಿವೆ. ಮಕ್ಕಳ ಜತೆ ಪಾಲಕರು ಆಸ್ಪತ್ರೆಗಳಲ್ಲಿ ಸಾಲು ಹಚ್ಚಿರುವ ದೃಶ್ಯಗಳು ಸಾಮಾನ್ಯವಾಗಿಬಿಟ್ಟಿವೆ. ಈ ಪರಿಸ್ಥಿತಿಯೇ ಈಗ ಮತ್ತೊಮ್ಮೆ ಇಡೀ ಜಗತ್ತು ಚೀನಾದತ್ತ ನೋಡುವಂತೆ ಮಾಡಿದೆ. ಚೀನಾದ ಆರೋಗ್ಯ ಸಮಸ್ಯೆಗಳು ತಮ್ಮ ದೇಶಕ್ಕೂ ಕಾಲಿಡದಂತೆ ಎಲ್ಲ ರಾಷ್ಟ್ರಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಆರಂಭಿಸಿದೆ. ಈ ವಿಷಯದಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ. ಕೋವಿಡ್ ಸಮಯದಲ್ಲಿ ಜಾರಿಗೊಳಿಸಿದ್ದಂತೆ ಈಗ ಮತ್ತೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಮೊದಲ ಹೆಜ್ಜೆ ಎಂಬಂತೆ, ರಾಜ್ಯಗಳಿಗೆ ಕೆಲವು ಸೂಚನೆಗಳನ್ನು ನೀಡಿದೆ. ಕರ್ನಾಟಕದ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಸಂಭಾವ್ಯ ಸಮಸ್ಯೆಗೆ ಸಾಕಷ್ಟು ಮೊದಲೇ ಮದ್ದರೆಯಲು ಮುಂದಾಗಿದ್ದಾರೆ. ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ, ಶೀತಜ್ವರ-ಉಸಿರಾಟದ ತೊಂದರೆ ಪ್ರಕರಣಗಳ ದಾಖಲೀಕರಣ, ಔಷಧ ದಾಸ್ತಾನು ಹೆಚ್ಚಳ, ವೈದ್ಯಕೀಯ ಪರಿಕರಗಳ ಲಭ್ಯತೆ ಮುಂತಾಗಿ ಹತ್ತು ಹಲವು ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದೆ. ಇದೇ ವೇಳೆ, ಸಾರ್ವಜನಿಕರೂ ಎಚ್ಚರದಿಂದ ಇರುವುದು ಅತ್ಯವಶ್ಯವಾಗಿರುವುದರಿಂದ ಜಾಗೃತಿ ಮೂಡಿಸುವ ಕಾರ್ಯ ಆರಂಭಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚೀನಾದ ಹೊಸ ಸಮಸ್ಯೆಯ ಕುರಿತ ಮಾಹಿತಿ ಇಲ್ಲಿದೆ.

  ಏನಿದು ಸೋಂಕು?: ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು ರೆಸ್ಪಿರೇಟರಿ ಸಿನ್ಸಿಟಿಯಲ್ ಹೆಸರಿನ ವೈರಸ್ ಈ ಉಸಿರಾಟದ ಕಾಯಿಲೆಯ ಹೆಚ್ಚಳಕ್ಕೆ ಕಾರಣ ಎಂದು ಚೀನಾ ಅಧಿಕಾರಿಗಳು ಹೇಳುತ್ತಾರೆ. ಮೈಕೋಪ್ಲಾಸ್ಮಾ ನ್ಯುಮೋನಿಯಾ ಸಾಮಾನ್ಯ ಸೋಂಕಾಗಿದ್ದು, ಇದು ಚಿಕ್ಕ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಯುವಕರಲ್ಲಿ ಸೌಮ್ಯವಾದ ಅನಾರೋಗ್ಯವನ್ನು ಉಂಟುಮಾಡುತ್ತವೆ. ಆದರೆ ಇದು ಶ್ವಾಸಕೋಶಕ್ಕೆ ಸೋಂಕನ್ನು ಉಂಟುಮಾಡಬಹುದು. ಮಕ್ಕಳ ಪ್ರಾಣಕ್ಕೂ ಇದು ಸಂಚಕಾರ ತರಬಲ್ಲದು.

  ಮೈಕೋಪ್ಲಾಸ್ಮಾ ಸೋಂಕು ಹೇಗೆ ಹರಡುತ್ತದೆ?: ಸೋಂಕಿತರು ಕೆಮ್ಮುವಾಗ ಮತ್ತು ಸೀನುವಾಗ ಬಿಡುಗಡೆಯಾಗುವ ಹನಿಗಳ ಸಂಪರ್ಕದ ಮೂಲಕ ಮೈಕೋಪ್ಲಾಸ್ಮಾ ಹರಡುತ್ತದೆ. ಇದು ಹರಡಲು ಸೋಂಕಿತರ ಜತೆ ನಿಕಟ ಸಂಪರ್ಕ ಅಗತ್ಯ. ಮನೆ, ಶಾಲೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಇದರ ಹರಡುವಿಕೆ ಹೆಚ್ಚು. ಸೋಂಕಿನ ಅವಧಿ ಸಾಮಾನ್ಯವಾಗಿ 10 ದಿನಗಳಿಗಿಂತ ಕಡಿಮೆಯಿರುತ್ತದೆ.

  ಭಾರತದಲ್ಲಿ ಸ್ಥಿತಿ ಹೇಗಿದೆ?: ಭಾರತಕ್ಕೆ ಸದ್ಯ ಅಪಾಯವಿಲ್ಲ. ಚೀನಾದಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸಭೆ ನಡೆಸಿದ್ದಾರೆ. ಸರ್ಕಾರವು ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗುತ್ತಿದೆ. ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ. ಇಂತಹ ಸೋಂಕು ಗಳ ವಿರುದ್ಧ ಹೋರಾಡಲು ಭಾರತವು ಲಸಿಕೆಗಳು ಮತ್ತು ಔಷಧಗಳನ್ನು ದಾಸ್ತಾನು ಮಾಡುತ್ತಿದೆ. ಮೈಕೋಪ್ಲಾಸ್ಮಾ ನ್ಯುಮೋನಿಯಾಕ್ಕೆ ಚಿಕಿತ್ಸೆ ನೀಡಲು ಆಂಟಿಬಯೋಟಿಕ್ ಅಜಿಥ್ರೊಮೈಸಿನ್​ನಂಥ ಔಷಧ ಭಾರತದಲ್ಲೇ ಲಭ್ಯ ಇದೆ. ಹೀಗಾಗಿ ಹೆಚ್ಚಿನ ಸಮಸ್ಯೆ ಆಗದು ಎನ್ನಲಾಗಿದೆ.

  ಸೋಂಕಿನ ಮೂಲ ಯಾವುದು?: ಚೀನಾದ ಈಶಾನ್ಯ ಪ್ರದೇಶಗಳಲ್ಲಿ ನವೆಂಬರ್ 13ರಂದು ಮೊದಲ ಪ್ರಕರಣ ವರದಿಯಾಗಿತ್ತು. ನಂತರ ಅತಿವೇಗವಾಗಿ ಈ ಸೋಂಕು ಹರಡುತ್ತಿದೆ. ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವವರಲ್ಲಿ ಹೆಚ್ಚಿನವರು ಮಕ್ಕಳು. ಈ ಸೋಂಕಿನಿಂದ ವೃದ್ಧರು ಮತ್ತು ಗರ್ಭಿಣಿಯರಿಗೆ ಕೂಡ ಹೆಚ್ಚಿನ ತೊಂದರೆ ಆಗಬಹುದು ಎಂದು ತಜ್ಞರು ಹೇಳಿದ್ದಾರೆ.

  ಹೊಸ ಸಾಂಕ್ರಾಮಿಕವೇ?: ಚೀನಾದಲ್ಲಿ ಈ ಸೋಂಕಿನ ಬಗ್ಗೆ ಜನರಲ್ಲಿ ಹಲವು ರೀತಿಯ ಪ್ರಶ್ನೆಗಳು ಉದ್ಭವಿಸುತ್ತಿವೆ. ಇದು ಕರೊನಾದಂತಹ ಹೊಸ ಸಾಂಕ್ರಾಮಿಕ ರೋಗಕ್ಕೆ ನಾಂದಿಯಾಗಬಹುದು ಎಂಬ ಆತಂಕ ಇದೆ. ಆದರೆ ಇದಕ್ಕೆ ಇನ್ನೂ ಪುರಾವೆ ಸಿಕ್ಕಿಲ್ಲ.

  ಪತ್ತೆ ಹೇಗೆ?: ಸೋಂಕಿನ ಲಕ್ಷಣಗಳನ್ನು ಆಧರಿಸಿ ಸಾಮಾನ್ಯ ವಾಗಿ ಮೈಕೋಪ್ಲಾಸ್ಮಾ ಸೋಂಕನ್ನು ಪತ್ತೆ ಮಾಡಬಹುದು. ಎದೆಯ ಎಕ್ಸ್-ರೇ ಆಧಾರದ ಮೇಲೆ ಇದನ್ನು ಗುರುತಿಸಬಹುದು. ಕೆಲ ಸಂದರ್ಭಗಳಲ್ಲಿ ರಕ್ತ ಪರೀಕ್ಷೆಯ ಆಧಾರದ ಮೇಲೆ ರೋಗ ನಿರ್ಣಯ ಮಾಡಬಹುದು.

  ಚೀನಾದಲ್ಲಿ ಏಕೆ ಹೆಚ್ಚುತ್ತಿವೆ?: ಚೀನಾದಲ್ಲಿ ಕರೊನಾ ದೀರ್ಘಕಾಲ ಕಾಡಿದೆ. ಇದರ ಪರಿಣಾಮದಿಂದಾಗಿ ಜನರ ಪ್ರತಿರಕ್ಷಣಾ ಶಕ್ತಿ ದುರ್ಬಲಗೊಂಡಿದೆ. ಇದರಿಂದಾಗಿ ಮೈಕೋಪ್ಲಾಸ್ಮಾ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನಲಾಗಿದೆ.

  ಲಕ್ಷಣಗಳೇನು?: ಮೈಕೋಪ್ಲಾಸ್ಮಾ ಸೋಂಕಿನ ಸಾಮಾನ್ಯ ಲಕ್ಷಣಗಳು ಜ್ವರ, ಕೆಮ್ಮು, ನೋಯುತ್ತಿರುವ ಗಂಟಲು, ತಲೆನೋವು ಮತ್ತು ಆಯಾಸ. ಇದರ ಹೊರತಾಗಿ ನ್ಯುಮೋನಿಯಾ ಸಹ ಸಂಭವಿಸಬಹುದು. ಗಂಭೀರ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯ. ಈ ಸೋಂಕು ಕಿವಿ ಸಮಸ್ಯೆಗಳನ್ನು ಉಂಟುಮಾಡಬಹುದು. ರೋಗಲಕ್ಷಣಗಳು ಕೆಲ ದಿನಗಳಿಂದ ಒಂದು ತಿಂಗಳವರೆಗೆ ಇರುತ್ತದೆ. ರೋಗ ಲಕ್ಷಣಗಳು ಸಾಮಾನ್ಯವಾಗಿ ಸೋಂಕಿಗೆ ಒಳಗಾದ ಎರಡು ಮೂರು ವಾರಗಳ ನಂತರ ಪ್ರಾರಂಭವಾಗುತ್ತವೆ.

  ಮುನ್ನೆಚ್ಚರಿಕೆ ಕ್ರಮಗಳು

  • ಇತರ ಸೋಂಕಿನಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೆ ಮೈಕೋಪ್ಲಾಸ್ಮಾ ಸೋಂಕು ಹರಡುವುದನ್ನು ತಡೆಯಬಹುದು.
  • ಸುತ್ತಲೂ ಶುದ್ಧ, ಉತ್ತಮ ವಾತಾವರಣ ಇರುವಂತೆ ನೋಡಿಕೊಳ್ಳಬೇಕು
  • ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಬೇಕು
  • ರೋಗಲಕ್ಷಣಗಳನ್ನು ಹೊಂದಿದ್ದರೆ ಮನೆಯಲ್ಲೇ ಇರುವುದು ಒಳಿತು
  • ಅನಾರೋಗ್ಯದಿಂದ ಬಳಲುತ್ತಿದ್ದರೆ, ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು
  • ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು
  • ನಿಯಮಿತವಾಗಿ ಕೈಗಳನ್ನು ತೊಳೆಯಬೇಕು
  • ಫೇಸ್ ಮಾಸ್ಕ್ ಬಳಸಬೇಕು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts