

ನವದೆಹಲಿ: ಟಿಬೆಟ್ನ ಸ್ವಾಯತ್ತ ಪ್ರದೇಶದಲ್ಲಿ ಚೀನಾ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಯೋಜನೆಗಳು ಮುಂದೊಂದು ದಿನ ನೇಪಾಳಕ್ಕೆ ಮುಳುಗು ನೀರು ತರುವುದು ಖಚಿತವಾಗಿದೆ. ಅಲ್ಲದೆ, ಅದರ ಈ ಕ್ರಮ ಭವಿಷ್ಯದಲ್ಲಿ ಭಾರತಕ್ಕೂ ಭಾರಿ ಗಂಡಾಂತರ ಉಂಟು ಮಾಡುವ ಶಂಕೆ ಮೂಡಿಸುತ್ತಿದೆ.
ಟಿಬೆಟ್ನಲ್ಲಿ ಚೀನಾ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾರ್ಯಗಳಿಂದಾಗಿ 11 ನದಿಗಳ ಹರಿವಿನ ದಿಕ್ಕೇ ಬದಲಾಗಿದೆ. ಇದರಿಂದಾಗಿ ಬರಡು ಭೂಮಿಯಾಗಿ ಉಳಿದಿರುವ ನೇಪಾಳದ ಪ್ರದೇಶವನ್ನು ಇಂಚಿಂಚಾಗಿ ಚೀನಾ ಕಬಳಿಸುತ್ತಿದೆ. ಈ ರೀತಿಯಾಗಿ ಅದು ಇದುವರೆಗೆ ನೇಪಾಳದ 36 ಹೆಕ್ಟೇರ್ ಭೂಮಿಯನ್ನು ತನ್ನದಾಗಿಸಿಕೊಂಡಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ನೇಪಾಳದ ಕೃಷಿ ವಲಯಕ್ಕೆ ಭಾರಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಕೆ.ಪಿ. ಓಲಿ ನೇತೃತ್ವದ ನೇಪಾಳ ಸರ್ಕಾರಕ್ಕೆ ನೇಪಾಳ ಕೃಷಿ ಇಲಾಖೆ ಎಚ್ಚರಿಕೆ ನೀಡಿದೆ.
ಇಂದು ಕೇವಲ 36 ಹೆಕ್ಟೇರ್ ಭೂಮಿಯನ್ನು ಚೀನಾ ಕಬಳಿಸಿರಬಹುದು. ಮುಂದೆ ಅದು ನೂರಾರು ಹೆಕ್ಟೇರ್ ಪ್ರದೇಶವನ್ನು ಕಬಳಿಸುವ ಸಾಧ್ಯತೆ ಇದೆ. ಅಲ್ಲೆಲ್ಲ ತನ್ನ ವೀಕ್ಷಣಾ ಗೋಪುರಗಳನ್ನು ನಿರ್ಮಿಸಿ, ಆ ಪ್ರದೇಶಗಳನ್ನು ತನ್ನದಾಗಿ ಅದು ಮಾಡಿಕೊಂಡಲ್ಲಿ ನೇಪಾಳದ ಗತಿ ಅಧೋಗತಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಆತಂಕ ವ್ಯಕ್ತಪಡಿಸಿದೆ.
ನೇಪಾಳದ ಉತ್ತರ ಭಾಗದಲ್ಲಿ ಚೀನಾದ ಗಡಿ ಹಾದು ಹೋಗುತ್ತದೆ. ಈ ಪ್ರದೇಶದಲ್ಲಿ ಪೂರ್ವದಿಂದ ಪಶ್ಚಿಮದವರೆಗೆ ಒಟ್ಟು 43 ಪರ್ವತಶ್ರೇಣಿಗಳಿವೆ. ಈ ಪರ್ವತಶ್ರೇಣಿಗಳೇ ಉಭಯ ರಾಷ್ಟ್ರಗಳ ನಡುವಿನ ನೈಸರ್ಗಿಕ ಗಡಿಯಾಗಿವೆ. ಉಭಯ ರಾಷ್ಟ್ರಗಳು ಈ ಪ್ರದೇಶದಲ್ಲಿ ಒಟ್ಟು 6 ಕಡೆ ಚೆಕ್ಪೋಸ್ಟ್ಗಳನ್ನು ನಿರ್ಮಿಸಿಕೊಂಡಿದ್ದು, ವಾಣಿಜ್ಯ-ವಹಿವಾಟಿಗೆ ಸಹಕಾರಿಯಾಗಿದೆ.
ಆದರೆ, ನೇಪಾಳದ ಕೃಷಿ ಇಲಾಖೆಯ ಭೂಮಾಪನಾ ಇಲಾಖೆಯ ಪ್ರಕಾರ ಟಿಬೆಟ್ನಲ್ಲಿ 11 ನದಿಗಳ ಹರಿವಿನ ದಿಕ್ಕನ್ನೇ ಚೀನಾ ಬದಲಿಸಿದೆ. ತನ್ಮೂಲಕ ಅದು ನೇಪಾಳದ ಹುಮ್ಲಾ, ರಸುವಾ, ಸಿಂಧುಪಾಲ್ಚೌಕ್ ಮತ್ತು ಶಂಕುವಾಸಭಾ ಜಿಲ್ಲೆಗಳಲ್ಲಿನ 36 ಹೆಕ್ಟೇರ್ ಅಥವಾ 0.36 ಚದರ ಕಿ.ಮೀ. ಭೂಮಿಯನ್ನು ತನ್ನದಾಗಿಸಿಕೊಂಡಿದೆ.
ಕಳೆದ ವರ್ಷವೇ ನೇಪಾಳದಲ್ಲಿ ಈ ವಿಷಯ ಬಹಿರಂಗಗೊಂಡು, ಕೆ.ಪಿ. ಶರ್ಮ ಓಲಿ ನೇತೃತ್ವದ ಸರ್ಕಾರದ ವಿರುದ್ಧ ಸಾರ್ವಜನಿಕ ಪ್ರತಿಭಟನೆಗಳು ನಡೆದಿದ್ದವು. ಆದರೆ, ಈ ವಿಷಯವಾಗಿ ಏನೂ ಆಗಿಯೇ ಇಲ್ಲ ಎಂಬಂತೆ ಬಿಂಬಿಸಿಕೊಂಡ ಕೆ.ಪಿ. ಶರ್ಮ ಓಲಿ, ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದರು.
ಜತೆಗೆ, ತಮ್ಮ ದೇಶದೆಲ್ಲಡೆ ರಾಷ್ಟ್ರೀಯ ಪ್ರಜ್ಞೆ ಮೂಡುವಂತೆ ಮಾಡಿ, ಅದನ್ನು ಭಾರತ ವಿರೋಧಿ ಮನೋಭಾವವಾಗಿ ತಿರುಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಕಳೆದ ನವೆಂಬರ್ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ್ದ ಭಾರತ ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕ ರಾಜ್ಯವನ್ನಾಗಿಯೂ, ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದ ನಂತರದಲ್ಲಿ ಭಾರತ ತಮ್ಮ ದೇಶದ ಭೂಭಾಗವನ್ನು ಕಬಳಿಸಿದೆ ಎಂಬ ಸುಳ್ಳು ಮಾಹಿತಿಗೆ ಹೆಚ್ಚಿನ ಪ್ರಚಾರ ನೀಡಿ, ತಮ್ಮ ಜನರಲ್ಲಿ ಭಾರತೀಯ ವಿರೋಧಿ ಮನೋಭಾವ ಹೆಚ್ಚಾಗುವಂತೆ ಮಾಡಿದ್ದರು.
ಈ ವರ್ಷದ ಏಪ್ರಿಲ್ನಲ್ಲಿ ಕೆ.ಪಿ. ಓಲಿ ಶರ್ಮ ವಿರುದ್ಧ ಅವರದ್ದೇ ಪಕ್ಷದಲ್ಲಿ ಭಿನ್ನಮತ ಎದ್ದಿತ್ತು. ಈ ಭಿನ್ನಮತವನ್ನು ಶಮನಗೊಳಿಸಿ, ತಮ್ಮ ಅಧಿಕಾರಿ ಉಳಿಸಿಕೊಳ್ಳುವಂತೆ ಮಾಡುವಲ್ಲಿ ಚೀನಾದ ಸಹಕಾರ ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಚೀನಾಕ್ಕೆ ವಿರುದ್ಧವಾಗಿ ತಮ್ಮ ಸರ್ಕಾರ ರೂಪಿಸಿದ್ದ ಎರಡು ಮಸೂದೆಗಳನ್ನು ಕೈಬಿಟ್ಟು, ಲಿಂಪಿಯಾಧುರಾ, ಕಾಲಾಪಾನಿ ಮತ್ತು ಲಿಪುಲೇಖ್ ಪ್ರದೇಶದಲ್ಲಿನ ಭಾರತೀಯ ಪ್ರದೇಶಗಳನ್ನು ತಮ್ಮದಾಗಿಸಿಕೊಂಡು ಹೊಸ ನಕ್ಷೆ ರೂಪಿಸಿ, ಸಂಸತ್ನ ಎರಡೂ ಮನೆಗಳಲ್ಲಿ ಅನುಮೋದನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತನ್ಮೂಲಕ ತಮ್ಮ ದೇಶದ ಜನರ ದೃಷ್ಟಿಯನ್ನು ಬೇರೆಡೆಗೆ ತಿರುವಂತೆ ಮಾಡಿದ್ದಾರೆ.
ಪರಿಷ್ಕೃತ ನಕ್ಷೆಗೆ ಅವರು ಅನುಮೋದನೆ ಪಡೆದುಕೊಳ್ಳುವ ಮುನ್ನ ಭಾರತ ಈ ವಿಷಯವಾಗಿ ದ್ವಿಪಕ್ಷೀಯ ಮಾತುಕತೆಯ ಪ್ರಸ್ತಾಪ ಇರಿಸಿತ್ತು. ಆದರೆ, ಭಾರತ ಮಾತುಕತೆಯ ಯಾವುದೇ ಪ್ರಸ್ತಾಪ ಇರಿಸಿಲ್ಲ ಎಂದು ಬಿಂಬಿಸಿಕೊಂಡು, ತರಾತುರಿಯಲ್ಲಿ ಪರಿಷ್ಕೃತ ನಕ್ಷೆಗೆ ಸಂಸತ್ನ ಎರಡೂ ಮನೆಗಳಲ್ಲಿ ಅನುಮೋದನೆ ಪಡೆದುಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅವರ ಈ ಕ್ರಮದಿಂದ ಭವಿಷ್ಯದಲ್ಲಿ ಭಾರತಕ್ಕೆ ತೊಂದರೆಯನ್ನುಂಟು ಮಾಡುವ ಸಾಧ್ಯತೆ ಹೆಚ್ಚಾಗಿದೆ.