

ನವದೆಹಲಿ: ಜಾಗತಿಕವಾಗಿ ಕರೊನಾ ಸೋಂಕು ಹರಡಿ ಇಡೀ ವಿಶ್ವವೇ ಕೈತೊಳೆಯುವಂತೆ ಮಾಡಿರುವ ಚೀನಾ ಇದೀಗ ಕೋವಿಡ್ 19 ನಿರೋಧಕ ಚುಚ್ಚುಮದ್ದನ್ನು ತಯಾರಿಸಿರುವುದಾಗಿ ಹೇಳಿಕೊಂಡಿದೆ. ಈ ಚುಚ್ಚುಮದ್ದನ್ನು ಮಂಗಗಳ ಮೇಲೆ ಪ್ರಯೋಗಿಸಿದ್ದು, ಅದು ಯಶಸ್ವಿಯಾಗಿರುವುದಾಗಿ ತಿಳಿಸಿದೆ.
ವರದಿಗಳ ಪ್ರಕಾರ PiCoVacc ಎಂಬ ಇನ್ಆಕ್ಟಿವೇಟೆಡ್ ಕೋವಿಡ್ 19 ನಿರೋಧಕ ಚುಚ್ಚುಮದ್ದನ್ನು ಬೀಜಿಂಗ್ ಮೂಲದ ಸೈನಾವ್ಯಾಕ್ ಬಯೋಟೆಕ್ ಸಿದ್ಧಪಡಿಸಿದೆ. ಈ ರೋಗನಿರೋಧಕ ಚುಚ್ಚುಮದ್ದು ಪ್ರಾಯೋಗಿಕವಾಗಿ ಸಾಕಷ್ಟು ಭರವಸೆ ಮೂಡಿಸಿದೆ. ಭಾರತೀಯ ಮೂಲದ ಮಂಗಗಳಿಗೆ ಈ ಚುಚ್ಚುಮದ್ದನ್ನು ನೀಡಲಾಗಿದ್ದು, ಅದು ಯಶಸ್ವಿಯಾಗಿದೆ ಎಂದು ಕಂಪನಿ ತಿಳಿಸಿದೆ.
ರೋಗನಿರೋಧಕ ಸಂಶೋಧಕರು ಮೊದಲಿಗೆ ಮಂಗಗಳಿಗೆ ರೋಗನಿರೋಧಕ ಚುಚ್ಚುಮದ್ದನ್ನು ನೀಡಿ, ಮೂರು ವಾರಗಳ ಬಳಿಕ ಅವನ್ನು ಕರೊನಾ ಸೋಂಕಿನ ವಾತಾವರಣದಲ್ಲಿ ಬಿಟ್ಟಿದ್ದರು. ಅವುಗಳಿಗೆ ನೀಡಲಾಗಿದ್ದ ರೋಗನಿರೋಧಕ ಚುಚ್ಚುಮದ್ದು ಕೋವಿಡ್ 19 ವೈರಾಣು ವಿರುದ್ಧ ಹೋರಾಡುವ ಪ್ರತಿಕಾಯಗಳನ್ನು (ಆ್ಯಂಟಿಬಾಡೀಸ್) ದೇಹದಲ್ಲಿ ಉತ್ಪತ್ತಿ ಮಾಡಿತು. ಈ ಪ್ರತಿಕಾಯಗಳು ಸಾಮಾನ್ಯ ವೈರಾಣುಗಳ ವಿರುದ್ಧವೂ ಹೋರಾಡಬಲ್ಲವು ಎಂದು ಸೈನ್ಸ್ ಮ್ಯಾಗಝೀನ್ನಲ್ಲಿ ಪ್ರಕಟವಾಗಿರುವ ವರದಿಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಪ್ರಮಾಣದ PiCoVacc ಚುಚ್ಚುಮದ್ದು ನೀಡಿದ್ದ ಮಂಗಗಳ ಶ್ವಾಸಕೋಶದಲ್ಲಿ ಒಂದು ವಾರದ ಬಳಿಕ ಕೋವಿಡ್ 19 ವೈರಾಣುಗಳು ಇರಲಿಲ್ಲ. ಆದರೆ, ಈ ಚುಚ್ಚಮದ್ದು ನೀಡದ ಮಂಗಗಳು ಸೋಂಕು ತಗುಲಿಸಿಕೊಂಡು, ತೀವ್ರ ಸ್ವರೂಪದ ನ್ಯುಮೋನಿಯಾಕ್ಕೆ ತುತ್ತಾದವು ಎಂದು ವರದಿಯಲ್ಲಿ ವಿವರಿಸಲಾಗಿದೆ.
ಒಂದು ಮೂಲದ ಪ್ರಕಾರ ಚೀನಾದಲ್ಲಿ ಈ ರೋಗನಿರೋಧಕ ಚುಚ್ಚುಮದ್ದನ್ನು ಏಪ್ರಿಲ್ ಮಧ್ಯದಿಂದಲೇ ಮನುಷ್ಯರ ಮೇಲೆ ಪ್ರಯೋಗಿಸಲಾಗುತ್ತಿದೆ. ಇದರ ಜತೆಗೆ ಚೀನಾದ ಸೇನಾಪಡೆ ಸಂಸ್ಥೆಯೊಂದು ಅಭಿವೃದ್ಧಿಪಡಿಸಿದೆ ಎನ್ನಲಾದ ರೋಗನಿರೋಧಕ ಚುಚ್ಚುಮದ್ದನ್ನು ಕೂಡ ಮನುಷ್ಯರ ಮೇಲೆ ಪ್ರಯೋಗಿಸಲಾಗುತ್ತಿದೆ ಎಂದು ಹೇಳಲಾಗಿದೆ.