

ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ಬಲಿದಾನದ ಬಳಿಕ ಚೀನಾ ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿದ್ದು, ಚೀನಾ ವಸ್ತುಗಳಿಗೆ ಬಹಿಷ್ಕಾರದ ಆಗ್ರಹ ಹೆಚ್ಚಾಗಿದೆ. ಮತ್ತೊಂದೆಡೆ ಭಾರತೀಯ ಕ್ರಿಕೆಟ್ನಲ್ಲಿ ಹರಿಯುತ್ತಿರುವ ಪ್ರಾಯೋಜಕತ್ವದ ಹಣದಲ್ಲಿ ಚೀನಾ ಕಂಪನಿಗಳ ಪಾಲು ಹೆಚ್ಚಾಗಿದೆ. ಚೀನಾ ಮೊಬೈಲ್ ಕಂಪನಿ ವಿವೋ, ಐಪಿಎಲ್ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐಗೆ ಪ್ರತಿ ವರ್ಷ 440 ಕೋಟಿ ರೂ. ಪಾವತಿಸುತ್ತದೆ. ಇದರ ನಡುವೆಯೂ ಚೀನಾ ಕಂಪನಿಗಳ ಜತೆಗೆ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳದಿರಲು ಸಿದ್ಧವಿರುವುದಾಗಿ ಬಿಸಿಸಿಐ ತಿಳಿಸಿದೆ. ಆದರೆ ಐಪಿಎಲ್ನ ಹಾಲಿ ಒಪ್ಪಂದವನ್ನು ಮುಂದುವರಿಸುವುದಾಗಿ ಹೇಳಿದ್ದು, ಇದರಿಂದ ಮಂಡಳಿ ಮತ್ತು ಭಾರತದ ಆರ್ಥಿಕತೆಗೆ ಯಾವ ರೀತಿಯ ಲಾಭವಿದೆ ಎಂದೂ ವಿವರಿಸಿದೆ.
‘ಕೇವಲ ಭಾವನಾತ್ಮಕವಾಗಿ ಯೋಚಿಸಬಾರದು. ತರ್ಕವನ್ನೂ ಅರ್ಥಮಾಡಿ ಕೊಳ್ಳಬೇಕು. ಚೀನಾ ಕಂಪನಿಯಿಂದ ನಾವು ಪಡೆದುಕೊಳ್ಳುವ ನೆರವು ಭಾರತದ ಲಾಭಕ್ಕಾಗಿಯೇ ಇದೆ. ಈ ಮೂಲಕ ಚೀನಾಗೆ ನಾವು ನೆರವಾಗುತ್ತಿಲ್ಲ. ಚೀನಾ ಕಂಪನಿಗೆ ಭಾರತದಲ್ಲಿ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿರುವಾಗ, ಅವರು ಭಾರತದ ಗ್ರಾಹಕರಿಂದ ಪಡೆದುಕೊಳ್ಳುವ ಹಣವನ್ನು ಪ್ರಾಯೋಜಕತ್ವ ಮೊತ್ತವಾಗಿ ಬಿಸಿಸಿಐಗೆ ಪಾವತಿಸುತ್ತಾರೆ. ಇದರಲ್ಲಿ ಶೇ. 42ರಷ್ಟನ್ನು ನಾವು ಭಾರತ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತೇವೆ. ಒಂದು ವೇಳೆ ಅವರು ಐಪಿಎಲ್ ಪ್ರಾಯೋಜಕತ್ವ ವಹಿಸಿಕೊಳ್ಳದಿದ್ದರೆ ಆ ಹಣವನ್ನು ಚೀನಾಗೆ ಕೊಂಡೊಯ್ಯುತ್ತಾರೆ’ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ವಿವರಿಸಿದ್ದಾರೆ. ಚೀನಾದ ಮತ್ತೊಂದು ಮೊಬೈಲ್ ಕಂಪನಿ ಒಪ್ಪೋ ಈ ಮುನ್ನ ಭಾರತ ತಂಡದ ಪ್ರಾಯೋಜಕತ್ವ ವಹಿಸಿಕೊಂಡಿತ್ತು. ಒಪ್ಪೋ ಭಾರತ ತಂಡದ ಪ್ರತಿ ಪಂದ್ಯಕ್ಕೆ 4.61 ಕೋಟಿ ರೂ.ಗಳನ್ನು ಬಿಸಿಸಿಐಗೆ ಪಾವತಿಸುತಿತ್ತು.
ಭಾರತದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ವಿುಸುವ ಗುತ್ತಿಗೆಯನ್ನು ಚೀನಾ ಕಂಪನಿಗೆ ನೀಡಿದ್ದರೆ ಮಾತ್ರ ತಪ್ಪಾಗುತ್ತದೆ. ಆದರೆ ಅಹಮದಾಬಾದ್ನಲ್ಲಿ ವಿಶ್ವದ ಅತಿದೊಡ್ಡ ಕ್ರೀಡಾಂಗಣ ನಿರ್ವಣದ ಕೆಲಸವನ್ನು ಭಾರತದ ಕಂಪನಿಗೇ (ಎಲ್ ಆಂಡ್ ಟಿ) ನೀಡಲಾಗಿದೆ. ಭಾರತದಲ್ಲಿ ಯಾವುದೇ ಕ್ರಿಕೆಟ್ ಮೂಲಸೌಕರ್ಯ ಅಭಿವೃದ್ಧಿಯ ಗುತ್ತಿಗೆಯನ್ನು ಚೀನಾ ಕಂಪನಿಗೆ ನೀಡಲಾಗಿಲ್ಲ. ಚೀನಾಗೆ ಬಿಸಿಸಿಐ ಯಾವುದೇ ಹಣ ನೀಡುತ್ತಿಲ್ಲ ಎಂದು ಅರುಣ್ ಧುಮಾಲ್ ತಿಳಿಸಿದ್ದಾರೆ.