

ನವದೆಹಲಿ: ಇಡೀ ಜಗತ್ತಿಗೆ ಕರೊನಾ ವೈರಾಣುವನ್ನು ಪ್ರಸಾರ ಮಾಡಿದ ಕುಖ್ಯಾತಿಗೆ ಒಳಗಾಗಿದ್ದರೂ ಚೀನಾ ಜಾಗತಿಕವಾಗಿ ತನ್ನ ಆರ್ಥಿಕಶಕ್ತಿಯ ಪ್ರದರ್ಶನಕ್ಕೆ ಮುಂದಾಗಿದೆ. ಮುಂಬೈ ಷೇರುಪೇಟೆಯಲ್ಲಿ ಭಾರಿ ಕುಸಿತ ಕಂಡಿರುವ ಭಾರತೀಯ ಬ್ಯಾಂಕ್ನ ಷೇರುಗಳನ್ನು ಚೀನಾ ಸರ್ಕಾರದ ನಿಯಂತ್ರಣದ ಬ್ಯಾಂಕ್ ಖರೀದಿಸುವ ಮೂಲಕ ಆರ್ಥಿಕ ಬಲಾಢ್ಯತೆಯನ್ನು ಪ್ರದರ್ಶಿಸಿದೆ.
ದೇಶಾದ್ಯಂತ ಕರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆಯಲ್ಲಿ ತೀವ್ರ ಅನಿಶ್ಚಿತತೆ ಮೂಡಿದೆ. ಒಂದು ದಿನ ಭಾರಿ ಏರಿಕೆ ಕಂಡರೆ ಉಳಿದ ದಿನಗಳಲ್ಲಿ ಸಹಸ್ರಾರು ಅಂಶಗಳಷ್ಟು ಭಾರಿ ಕುಸಿತ ಕಾಣುತ್ತಿದೆ. ಇದರ ಪರಿಣಾಮ ಹೌಸಿಂಗ್ ಡೆವೆಲಪ್ಮೆಂಟ್ ಫೈನಾನ್ಸ್ ಕಾರ್ಪೋರೇಷನ್ನ (ಎಚ್ಡಿಎಫ್ಸಿ) ಷೇರುಗಳ ಬೆಲೆ ಪಾತಾಳಕ್ಕಿಳಿದಿದೆ. ಕಳೆದ ಒಂದು ತಿಂಗಳಲ್ಲೇ ಎಚ್ಡಿಎಫ್ಸಿ ಷೇರುಗಳ ಬೆಲೆ ಶೇ.25 ಕಡಿಮೆಯಾಗಿದೆ.
ಈ ಅವಕಾಶವನ್ನು ತನ್ನ ಲಾಭಕ್ಕೆ ಬಳಸಿಕೊಂಡಿರುವ ಪೀಪಲ್ಸ್ ಬ್ಯಾಂಕ್ ಆಫ್ ಚೈನಾ (ಪಿಬಿಒಸಿ) ಎಚ್ಡಿಎಫ್ಸಿಯ 1.75 ಕೋಟಿ ಷೇರುಗಳನ್ನು ಖರೀದಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಚ್ಡಿಎಫ್ಸಿಯ ಉಪಾಧ್ಯಕ್ಷ ಮತ್ತು ಸಿಇಒ ಕೇಕಿ ಮಿಸ್ಟ್ರಿ, ಪಿಬಿಒಸಿ ಈ ಮೊದಲು ಎಚ್ಡಿಎಫ್ಸಿಯ ಶೇ.0.8 ಷೇರುಗಳನ್ನು ಹೊಂದಿತ್ತು. ಇದೀಗ ಆ ಪ್ರಮಾಣವನ್ನು ಶೇ.1.1ಕ್ಕೆ ಹೆಚ್ಚಿಸಿಕೊಂಡಿದೆ. ಅದರಲ್ಲಿ ವಿಶೇಷತೆ ಏನೂ ಇಲ್ಲ ಎಂದು ಹೇಳಿದ್ದಾರೆ.