

ನವದೆಹಲಿ: ಅದೆಷ್ಟೋ ಆಸೆ ಹೊತ್ತು ಭಾರತಕ್ಕೆ ಭೇಟಿ ನೀಡಲು ಬಂದಿದ್ದ ಕೆಲ ವಿದೇಶಿಗರಿಗೆ ಮುಜುಗರದ ಪರಿಸ್ಥಿತಿ ಎದುರಾಗಿದೆ. ಅವರು ಪ್ರಯಾಣಿಸುತ್ತಿದ್ದ ಆಟೋವನ್ನು ಕೆಲವು ಮಕ್ಕಳು ಹಿಂಬಾಲಿಸಿಕೊಂಡು ಹೋಗಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ದೇಶದ ರಾಜಧಾನಿ ದೆಹಲಿಯಲ್ಲಿ ಈ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿದೇಶಿಗರು ಆಟೋದಲ್ಲಿ ತೆರಳುತ್ತಿದ್ದ ವೇಳೆ ಇಬ್ಬರು ಭಿಕ್ಷುಕಿಯರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಆಗ ವಿದೇಶಿಗರು ಆಟೋದಲ್ಲಿ ಮುಂದಕ್ಕೆ ಸಾಗಿದರು. ಕೂಡಲೇ ಆಕೆ ಬಳಿ ಇದ್ದ ಒಬ್ಬ ಹುಡುಗಿ ವಾಹನದ ಹಿಂದೆ ಓಡಿಹೋದಳು. ಇನ್ನೊಬ್ಬ ಹುಡುಗಿ ಆಟೋ ಹಿಡಿದುಕೊಂಡು ಅಪಾಯಕಾರಿಯಾಗಿ ನೇತಾಡಿದಳು. ಹುಡುಗಿಯರ ಈ ಕೃತ್ಯದಿಂದ ಪ್ರವಾಸಿಗರು ಕೊಂಚ ಆತಂಕಗೊಂಡಿದ್ದರು.
ವಿಡಿಯೋ ರೆಕಾರ್ಡ್ ಮಾಡುವಾಗ ಪ್ರವಾಸಿಗರೊಬ್ಬರು ಆಘಾತ ವ್ಯಕ್ತಪಡಿಸಿ, 'ಇದು ತುಂಬಾ ಕೆಟ್ಟದ್ದು, ಏನಾಗುತ್ತಿದೆ ಎಂದು ನನಗೆ ನಂಬಲಾಗುತ್ತಿಲ್ಲ' ಎಂದು ಹೇಳಿದರು.
ಈ ಬಗ್ಗೆ ಗಮನಹರಿಸದೆ ಆಟೋ ಚಾಲಕ ಆಟೋ ಮುಂದಕ್ಕೆ ಓಡಿಸಿಕೊಂಡು ಹೋಗಿರುವುದು ಗಮನಾರ್ಹ ಸಂಗತಿಯಾಗಿದೆ. ದೆಹಲಿಯಲ್ಲಿ ಇಂತಹ ಪರಿಸ್ಥಿತಿ ಸಹಜ ಎಂಬಂತೆ ಆ ಚಾಲಕನ ಧೋರಣೆ ಇರಬಹುದು. ಆದರೆ ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರೆ ತಪ್ಪಾಗಲಾರದು.
ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿಗೆ ಬರುವ ಅನೇಕ ವಿದೇಶಿ ಪ್ರವಾಸಿಗರು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಕೆಲವು ನೆಟಿಜನ್ಗಳು ಟೀಕಿಸಿದ್ದಾರೆ.
ಈ ಹಿಂದೆಯೂ ಇದೇ ರೀತಿಯ ವಿಡಿಯೋಗಳು ಹರಿದಾಡಿವೆ. ಎನ್ಜಿಒ ಯೂತ್ ರೀಚ್ ಬಹಿರಂಗಪಡಿಸಿದ ಅಂಕಿಅಂಶಗಳ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಸುಮಾರು 70 ಸಾವಿರ ಬೀದಿ ಮಕ್ಕಳಿದ್ದಾರೆ. ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಭಿಕ್ಷೆ ಬೇಡಿ ಬದುಕುತ್ತಿದ್ದಾರೆ.