

ಗಾಜಿಯಾಬಾದ್: ನಾಯಿ ಕಡಿತದಿಂದ 14 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಗಾಜಿಯಾಬಾದ್‌ನ ವಿಜಯ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚರಣ್ಸಿಂಗ್ ಕಾಲೋನಿಯಲ್ಲಿ ವಾಸವಿರುವ ಯಾಕೂಬ್ ಎಂಬುವವರ ಹಿರಿಯ ಮಗ ಸಬೇಜ್ಗೆ ಒಂದೂವರೆ ತಿಂಗಳ ಹಿಂದೆ ನಾಯಿ ಕಚ್ಚಿತ್ತು. ಆತ ಭಯದಿಂದ ಈ ವಿಷಯವನ್ನು ಮನೆಯಲ್ಲಿ ಯಾರಿಗೂ ತಿಳಿಸಿರಲಿಲ್ಲ. ನಾಯಿ ಕಚ್ಚಿದಾಗ ಗೀರು ಬಿದ್ದಂತಾಗಿತ್ತು. ಆತ ಮನೆಯವರಿಗೆ ಹೇಳದೆ ತಾನಾಗಿಯೇ ಈ ಗಾಯಕ್ಕೆ ಔಷಧ ಹಾಕುತ್ತಲೇ ಇದ್ದು, ಕೆಲವೇ ದಿನಗಳಲ್ಲಿ ಅದು ಒಣಗಿದೆ.
ಆದರೆ ಇತ್ತ ಕಡೆ, ನಿಧಾನವಾಗಿ ರೇಬೀಸ್ ಸೋಂಕು ದೇಹದೊಳಗೆ ಹರಡತೊಡಗಿದ್ದು ಕೆಲವು ದಿನಗಳ ನಂತರ ಮಗುವಿನ ಸ್ಥಿತಿ ಹದಗೆಡಲು ಪ್ರಾರಂಭಿಸಿದೆ. ಕೆಲವು ದಿನಗಳಿಂದ ಆತ ಆಹಾರ ತಿನ್ನುವುದನ್ನು ಮತ್ತು ನೀರು ಕುಡಿಯುವ ಅಭ್ಯಾಸವನ್ನು ಕಡಿಮೆ ಮಾಡಿದ್ದಾನೆ. ಈ ನಡುವೆ ಆತನಿಗೆ ನೀರು ಕಂಡರೆ ಭಯ ಶುರುವಾಗಿದ್ದು, ಆತನ ವರ್ತನೆ ಬದಲಾಗತೊಡಗಿತ್ತು.
ಇದನ್ನೂ ಓದಿ: VIDEO| ಮಗನ ಮೃತದೇಹವನ್ನು ತಳ್ಳುಗಾಡಿಯಲ್ಲಿರಿಸಿ ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೇ ಪರದಾಡಿದ ತಾಯಿ..
ಕೊನೆಗೆ ಕುಟುಂಬಸ್ಥರು ಆತನನ್ನು ವೈದ್ಯರ ಬಳಿ ಕರೆದೊಯ್ದಿದ್ದು, ರೇಬಿಸ್ ರೋಗಲಕ್ಷಣಗಳನ್ನು ಕಂಡ ವೈದ್ಯರು ಬಾಲಕನ್ನು ದೆಹಲಿಯ ಜಿಟಿಬಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲಿಂದ ಏಮ್ಸ್ಗೆ ಹೋಗುವಂತೆ ಸಲಹೆ ನೀಡಲಾಗಿದ್ದು, ಅಲ್ಲಿ ವೈದ್ಯರು ತಪಾಸಣೆ ನಡೆಸಿದಾಗ ರೇಬೀಸ್ ಸೋಂಕು ದೇಹದಾದ್ಯಂತ ಹರಡಿರುವುದು ಕಂಡುಬಂದಿದೆ. ರೇಬೀಸ್ ವಾಸಿಯಾಗದ ಕಾರಣ, ಮಗು ಬದುಕುವುದು ಕಷ್ಟ ಎಂದು ವೈದ್ಯರು ಹೇಳಿದ್ದಾರೆ.
ಆ ಬಳಿಕ ಮಗು ಸೋಮವಾರ ಆಸ್ಪತ್ರೆಯಿಂದ ಹಿಂತಿರುಗುವ ವೇಳೆ ಮೃತಪಟ್ಟಿದ್ದು, ಈ ಘಟನೆಯಿಂದ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ. ನಾಯಿ ಕಚ್ಚಿದ 24 ಗಂಟೆಯೊಳಗೆ ಆ್ಯಂಟಿ ರೇಬಿಸ್ ಲಸಿಕೆಯನ್ನು ಹಾಕಿಸಬೇಕು ಇದರಿಂದ ಜೀವ ಸುರಕ್ಷಿತವಾಗಿರುತ್ತದೆ.(ಏಜೆನ್ಸೀಸ್)