ಮಗಳ ಮಡಿಲಲ್ಲೇ ಪ್ರಾಣ ಬಿಟ್ಟ ತಾಯಿ! ಜೆಸಿಬಿಯಲ್ಲಿ ಶವ ಹೊತ್ತೊಯ್ದ ಸ್ಥಳೀಯರು! ಮನಕಲಕುವ ಘಟನೆ

chikkaballapura
Published on

ಚಿಕ್ಕಬಳ್ಳಾಪುರ: ಹೆತ್ತು, ಹೊತ್ತು ಸಾಕಿದ್ದ ಮಗಳ ತೊಡೆಯ ಮೇಲೇ ತಾಯಿ ಪ್ರಾಣ ಬಿಟ್ಟಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ-ಕೋಲಾರ ರಸ್ತೆಯ ಕುರುಟುಹಳ್ಳಿ ಗ್ರಾಮದಲ್ಲಿ ನಡೆದಿದೆ. ಆ ಶವವನ್ನು ಜೆಸಿಬಿಯಲ್ಲಿ ಹೊತ್ತೊಯ್ದು ಮರಣೋತ್ತರ ಪರೀಕ್ಷೆ ಮಾಡಿಸಿ, ನಂತರ ಅದೇ ಜೆಸಿಬಿಯಲ್ಲಿ ವಾಪಾಸು ತಂದು ಶವಸಂಸ್ಕಾರ ಮಾಡಿರುವುದಾಗಿ ವರದಿಯಾಗಿದೆ.

40 ವರ್ಷಧ ಚಂದ್ರಕಲಾ ಎನ್.ಕೊತ್ತೂರು ಗ್ರಾಮದ ಮೂಲದವಳಾಗಿದ್ದಳು. ಆಕೆಗೆ ಕುರುಟುಹಳ್ಳಿಯ ಶ್ರೀನಿವಾಸ ಜತೆ ಮದುವೆಯಾಗಿದ್ದು ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳಿದ್ದಾರೆ. ಶ್ರೀನಿವಾಸ 10 ವರ್ಷಗಳ ಹಿಂದೆ ಸಾವನ್ನಪ್ಪಿದ್ದಾನೆ. ಅದಾದ ನಂತರ ಆಕೆ ಕುರುಟುಹಳ್ಳಿ ಗ್ರಾಮ ಬಿಟ್ಟು ಮಕ್ಕಳೊಂದಿಗೆ ಚಿಂತಾಮಣಿ ಬಂದು ಅಲ್ಲಿಯೇ ಜೀವನ ಆರಂಭಿಸಿದ್ದಾಳೆ. ಮಗನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು, ಮಗಳು ಲಾವಣ್ಯ ಜತೆ ಜೀವನ ನಡೆಸಲಾರಂಭಿಸಿದ್ದಾಳೆ.

ಕೂಲಿ ಮಾಡಿಕೊಂಡು ಬದುಕುತ್ತಿದ್ದ ಚಂದ್ರಕಲಾಗೆ ಕಳೆದ ಒಂದು ವಾರದಿಂದ ಅನಾರೋಗ್ಯ ಕಾಡಲಾರಂಭಿಸಿದೆ. ಅದೇ ಕಾರಣಕ್ಕೆ ಬುಧವಾರ ಮಧ್ಯ ರಾತ್ರಿ ಮಗಳೊಂದಿಗೆ ಅಪರಚಿತ ವಾಹನದಲ್ಲಿ ಬಂದು ಕುರುಟುಹಳ್ಳಿ ಹೋಟೆಲ್ ಮುಂದೆ ಇಳಿದಿದ್ದಾಳೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಚಂದ್ರಕಲಾ ರಸ್ತೆ ಬದಿಯೇ ಕುಳಿತುಕೊಂಡು, ನಂತರ ಅಲ್ಲಿಯೇ ಮಗಳ ತೊಡೆ ಮೇಲೆ ಮಲಗಿದ್ದಾಳೆ. ಅದನ್ನು ಕಂಡ ಕೆಲ ಸ್ಥಳೀಯರು, ಯಾರು? ಏನೆಂದು ವಿಚಾರಿಸಿದ್ದಾರೆ. ತಾಯಿಯನ್ನು ಕೂರಿಸುವಂತೆ ಮಗಳಿಗೆ ಹೇಳಿದ್ದಾರೆ. ಆದರೆ ತಾಯಿಗೆ ಕೂರಲು ಸಾಧ್ಯವಾಗಿಲ್ಲ. ಅವರ ಸ್ಥಿತಿಯನ್ನು ಮನಗಂಡ ಗ್ರಾಮಸ್ಥರು ಊಟ, ನೀರಿನ ವ್ಯವಸ್ಥೆಯನ್ನು ಮಾಡಿಕೊಟ್ಟು ಅಲ್ಲಿಂದ ತೆರಳಿದ್ದಾರೆ. ಲಾವಣ್ಯ ಕೂಡ ತಾಯಿಯನ್ನು ತೊಡೆ ಮೇಲೆ ಮಲಗಿಸಿಕೊಂಡು ಹಾಗೇ ನಿದ್ರೆಗೆ ಜಾರಿದ್ದಾಳೆ.

ಗುರುವಾರ ಬೆಳಗ್ಗೆ ಎದ್ದ ಲಾವಣ್ಯ ತಾಯಿಯನ್ನು ಎಬ್ಬಿಸಲು ಪ್ರಯತ್ನಿಸಿದ್ದಾಳೆ. ಆದರೆ ಆಕೆ ಕದಲಿಲ್ಲ. ಅಮ್ಮ ಏಳುತ್ತಿಲ್ಲ ಎಂದು ಲಾವಣ್ಯ ಅಳುತ್ತಿರುವುದನ್ನು ಕಂಡು ಅಲ್ಲಿ ಗ್ರಾಮಸ್ಥರು ಜಮಾವಣೆಯಾಗಿದ್ದಾರೆ. ನಂತರ ಆ ವಿಚಾರವನ್ನು ಗ್ರಾಮಾಂತರ ಪೊಲೀಸರ ಗಮನಕ್ಕೆ ತರಲಾಗಿದೆ. ಗ್ರಾಮಸ್ಥರೆಲ್ಲ ಸೇರಿ ಚಂದ್ರಕಲಾಳ ಶವವನ್ನು ಜೆಸಿಬಿಯಲ್ಲಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಅದೇ ಜೆಸಿಬಿಯಲ್ಲಿ ಶವ ವಾಪಾಸು ಕರೆದೊಯ್ದು ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net