ನ್ಯಾಯಮೂರ್ತಿ ಸಂಜೀವ್​ ಖನ್ನಾ ಸುಪ್ರೀಂಕೋರ್ಟ್​ನ ಮುಂದಿನ ಸಿಜೆಐ: ಡಿ.ವೈ. ಚಂದ್ರಚೂಡ್​ ಶಿಫಾರಸು | Sanjiv Khanna

Sanjiv Khanna
Published on

ನವದೆಹಲಿ: ಸುಪ್ರೀಂಕೋರ್ಟ್ ( Supreme Court ) ​ನ ಮುಂದಿನ ಮುಖ್ಯ ನ್ಯಾಯಮೂರ್ತಿಗಳಾಗಿ ಅತ್ಯಂತ ಹಿರಿಯ ನ್ಯಾಯಮೂರ್ತಿ ಸಂಜೀವ್​ ಖನ್ನಾ ( Sanjiv Khanna ) ಅವರು ನೇಮಕವಾಗಲಿದ್ದಾರೆ. ಹಾಲಿ ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ( DY Chandrachud )​ ಅವರು ತಮ್ಮ ಉತ್ತರಾಧಿಕಾರಿಯಾಗಿ ಸಂಜೀವ್​ ಖನ್ನಾ ಹೆಸರನ್ನು ಸೂಚಿಸಿದ್ದಾರೆ.

ಡಿ.ವೈ. ಚಂದ್ರಚೂಡ್​ ಅವರು ನವೆಂಬರ್ 8 ರಂದು ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆಯಲ್ಲಿ, ಆ ಸ್ಥಾನಕ್ಕೆ ನ್ಯಾಯಮೂರ್ತಿ ಸಂಜೀವ್​ ಖನ್ನಾ​ ಅವರ ಹೆಸರನ್ನು ಶಿಫಾರಸು ಮಾಡಿ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್​ ಅವರು  ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ತಮ್ಮ ಉತ್ತರಾಧಿಕಾರಿಯನ್ನು ಶಿಫಾರಸು ಮಾಡುವಂತೆ ಕಾನೂನು ಸಚಿವಾಲಯ ಕೋರಿದ ಹಿನ್ನೆಲೆಯಲ್ಲಿ ಚಂದ್ರಚೂಡ್​ ಅವರು ಈ ಶಿಫಾರಸು ಮಾಡಿದ್ದಾರೆ. ಎರಡು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ನವೆಂಬರ್ 8 ರಂದು ನಿವೃತ್ತರಾಗಲಿದ್ದಾರೆ.

ಒಂದು ವೇಳೆ ಚಂದ್ರಚೂಡ್​ ಅವರ ಶಿಫಾರಸು ಅಂತಿಮಗೊಂಡರೆ ನ್ಯಾಯಮೂರ್ತಿ ಸಂಜೀವ್​ ಖನ್ನಾ ಅವರು ಸುಪ್ರೀಂಕೋರ್ಟ್​ನ 51ನೇ ಮುಖ್ಯನ್ಯಾಯಮೂರ್ತಿ ಆಗಲಿದ್ದಾರೆ. 2025, ಮೇ 13ರಂದು ಸಂಜೀವ್​ ಖನ್ನಾ ಅವರು ನಿವೃತ್ತಿಯಾಗಲಿದ್ದು, ಅದಕ್ಕೂ ಮುನ್ನ ಆರು ತಿಂಗಳುಗಳ ಕಾಲ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಲಿದ್ದಾರೆ.

ಭಾರತೀಯ ನ್ಯಾಯಾಂಗದಲ್ಲಿ ಪ್ರಮುಖ ವ್ಯಕ್ತಿಯಾಗಿರುವ ನ್ಯಾಯಮೂರ್ತಿ ಖನ್ನಾ, 1983ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‌ಗೆ ವಕೀಲರಾಗಿ ದಾಖಲಾದಾಗಿನಿಂದ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ತೀಸ್ ಹಜಾರಿ ಜಿಲ್ಲಾ ನ್ಯಾಯಾಲಯಗಳಲ್ಲಿ ತಮ್ಮ ವಕೀಲ ವೃತ್ತಿಯನ್ನು ಪ್ರಾರಂಭಿಸಿ, ಶೀಘ್ರವಾಗಿ ದೆಹಲಿ ಹೈಕೋರ್ಟ್‌ಗೆ ತೆರಳಿದರು. 2005ರಲ್ಲಿ ಖನ್ನಾ ಅವರನ್ನು ದೆಹಲಿ ಹೈಕೋರ್ಟ್‌ನಲ್ಲಿ ಹೆಚ್ಚುವರಿ ನ್ಯಾಯಾಧೀಶರ ಸ್ಥಾನಕ್ಕೆ ಏರಿಸಲಾಯಿತು. ಮರುವರ್ಷವೇ ಖಾಯಂ ನ್ಯಾಯಾಧೀಶರಾದರು. ಅವರ ಅಧಿಕಾರಾವಧಿಯುದ್ದಕ್ಕೂ, ದೆಹಲಿ ನ್ಯಾಯಾಂಗ ಅಕಾಡೆಮಿ, ದೆಹಲಿ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಸೆಂಟರ್ ಮತ್ತು ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರಗಳು ಸೇರಿದಂತೆ ಹಲವಾರು ಪ್ರಮುಖ ಸಂಸ್ಥೆಗಳ ಅಧ್ಯಕ್ಷ ಮತ್ತು ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.

2019, ಜನವರಿ 18ರಂದು ನ್ಯಾಯಮೂರ್ತಿ ಖನ್ನಾ ಅವರನ್ನು ಸುಪ್ರೀಂಕೋರ್ಟ್‌ಗೆ ಏರಿಸಲಾಯಿತು. ಯಾವುದೇ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸದೆ ಈ ಮೈಲಿಗಲ್ಲನ್ನು ಸಾಧಿಸಿದ ಕೆಲವೇ ನ್ಯಾಯಾಧೀಶರಲ್ಲಿ ಖನ್ನಾ ಅವರು ಒಬ್ಬರಾದರು. ಖನ್ನಾ ಅವರ ಒಂದು ಗಮನಾರ್ಹ ತೀರ್ಪು ಯಾವುದೆಂದರೆ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ಪಡೆಯಲು ಅವಕಾಶ ಮಾಡಿಕೊಟ್ಟಿದ್ದು. ಇದರಿಂದ ಲೋಕಸಭೆ ಚುನಾವಣೆಯ ಸಮಯದಲ್ಲಿ ಪ್ರಚಾರ ಮಾಡಲು ಕೇಜ್ರಿವಾಲ್​ಗೆ ಅನುವು ಮಾಡಿಕೊಟ್ಟಿತು. ಇತ್ತೀಚೆಗೆ ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ಘೋಷಿಸಿದ ಐವರು ನ್ಯಾಮೂರ್ತಿಗಳ ಪೀಠದಲ್ಲಿ ಸಂಜೀವ್​ ಖನ್ನಾ ಕೂಡ ಭಾಗವಾಗಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net