ಬಿಲಾಯ್ (ಛತ್ತಿಸಗಢ): ಬಿಲಾಯ್ ಉಕ್ಕು ಕಾರ್ಖಾನೆ ಭೇಟಿಗೆ ಆಗಮಿಸಿರುವ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬಿಲಾಯ್ ಕನ್ನಡ ಸಂಘದ ಸದಸ್ಯರು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.
ಇದನ್ನೂ ಓದಿ: ಶಾಸಕ ಮುನಿರತ್ನ ಬಂಧನ ಪ್ರಕರಣ: ಡಿಕೆ ಶಿವಕುಮಾರ್ ಬಗ್ಗೆ ರಮೇಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ನಾಗನಾರ್ ಉಕ್ಕು ಸ್ಥಾವರಕ್ಕೆ ಭೇಟಿ ನೀಡಿದ ನಂತರ ಸೋಮವಾರ ಸಂಜೆ ಬಿಲಾಯ್ ಗೆ ಆಗಮಿಸಿದ ಸಚಿವರನ್ನು ಕಾರ್ಖಾನೆಯ ಅತಿಥಿ ಗೃಹದಲ್ಲಿ ಭೇಟಿಯಾದ ಕನ್ನಡ ಸಂಘದ ಸದಸ್ಯರು, ಕೇಂದ್ರದಲ್ಲಿ ಉಕ್ಕು ಖಾತೆ ಸಚಿವರಾಗಿರುವ ಕನ್ನಡಿಗರೊಬ್ಬರು ಬಿಲಾಯ್ ಗೆ ಭೇಟಿ ನೀಡಿದ್ದು ನಮಗೆ ಅತೀವ ಸಂತಸ ಉಂಟು ಮಾಡಿದೆ ಎಂದು ಹೇಳಿದರು.
ನಿಮ್ಮ ತಂದೆಯವರು ಪ್ರಧಾನಿ ಆಗಿದ್ದರು. ನೀವು ಉಕ್ಕು ಸಚಿವರಾಗಿ ಬಿಲಾಯ್ ಕಾರ್ಖಾನೆಗೆ ಬಂದಿರುವುದು ನಮಗೆ ಹೆಮ್ಮೆ ತಂದಿದೆ. ನಮ್ಮ ಹಿರಿಯರು ಈ ಕಾರ್ಖಾನೆಗೆ ಉದ್ಯೋಗ ಅರಸಿ ಬಂದಿದ್ದರು. ಈಗ ಮೂರನೇ ತಲೆಮಾರಿನ ಕನ್ನಡಿಗರು ಕೂಡ ಬಿಲಾಯ್ ನಲ್ಲಿಯೇ ನೆಲೆಸಿದ್ದಾರೆ ಎಂದು ಸಚಿವರಿಗೆ ತಿಳಿಸಿದರು. ಅಲ್ಲದೆ, ಕನ್ನಡಿಗರನ್ನು ಕಂಡ ಕೂಡಲೇ ಸಚಿವರು ಕೂಡ ಸಂತಸ ವ್ಯಕ್ತಪಡಿಸಿದರು.
ನಾವು ಕರ್ನಾಟಕದಿಂದ ಬಹಳ ದೂರ ಇದ್ದರೂ ಕನ್ನಡ, ಕನ್ನಡತನದಿಂದ ವಿಮುಖರಾಗಿಲ್ಲ. ಮನೆಯಲ್ಲಿ ಕನ್ನಡವನ್ನೇ ಮಾತನಾಡುತ್ತೇವೆ. ನಮ್ಮ ಮಕ್ಕಳು ಈಗ ಇಲ್ಲಿ ಮೂರನೇ ತಲೆಮಾರು. ಅವರಿಗೂ ಕನ್ನಡ ಕಲಿಸಿದ್ದೇವೆ. ಮೊದಲ ತಲೆಮಾರಿನ ನಂತರ ಎರಡನೇ ತಲೆಮಾರು, ಮೂರನೇ ತಲೆಮಾರು ಕೂಡ ಬಿಲಾಯ್ ನಲ್ಲಿಯೇ ನೆಲೆಸಿದೆ ಎಂದು ಕನ್ನಡ ಸಂಘದ ಸದಸ್ಯರು ಸಚಿವರಿಗೆ ಹೇಳಿದರು.
ಕನ್ನಡ ಸಂಘಕ್ಕೆ ಆಹ್ವಾನ: ಕನ್ನಡ ಸಂಘಕ್ಕೆ ಆಗಮಿಸಬೇಕು ಎಂದು ಇದೇ ವೇಳೆ ಕನ್ನಡ ಸದಸ್ಯರು ಸಚಿವರನ್ನು ಆಹ್ವಾನಿಸಿದರು. ಅನೇಕ ವರ್ಷಗಳಿಂದ ಸಂಘವು ಕ್ರಿಯಾಶೀಲವಾಗಿದೆ. ನಿರಂತರವಾಗಿ ಕನ್ನಡ ಸೇವೆ ಮಾಡಿಕೊಂಡು ಬರುತ್ತಿದೆ ಎಂದು ಸದಸ್ಯರು ಸಚಿವರಿಗೆ ವಿವರಿಸಿದರು. ಬಿಡುವು ಮಾಡಿಕೊಂಡು ಸಂಘಕ್ಕೆ ಭೇಟಿ ಕೊಡುವುದಾಗಿ ಸಚಿವರು ಭರವಸೆ ನೀಡಿದರು.
ಸಂಘದ ಸದಸ್ಯರಾದ ಶಶಿಭೂಷಣ್, ವೆಂಕಟೇಶ್ ಕಾರಂತ್, ಶ್ರೀಧರ್, ನಾಗೇಂದ್ರ ಧನ, ಅನುರಾಧ ಧನ, ವೆಂಕಟೇಶ್ ಬಾಬು, ನಂದಕುಮಾರ್, ಸುಚಿತ್ರಾ, ರೀಟಾ, ಚಂದ್ರಲತಾ ಅವರು ಸಚಿವರನ್ನು ಭೇಟಿಯಾದ ನಿಯೋಗದಲ್ಲಿ ಇದ್ದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕಕ್ಕೆ ಮರಣ ಶಾಸನ: ಬಿ.ವೈ.ವಿಜಯೇಂದ್ರ ಗಂಭೀರ ಆರೋಪ