

ನವದೆಹಲಿ: ಛತ್ ಪೂಜೆಯಲ್ಲಿ ಭಕ್ತರು ಕಲುಷಿತ ಯಮುನಾ ನದಿ ನೀರಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇರುವಾಗ ದೆಹಲಿಯ ಬಿಜೆಪಿ ಸರ್ಕಾರ ಪ್ರಧಾನಿ ಮೋದಿಗಾಗಿ ಪಿಲ್ಟರ್ ಮಾಡಿದ ನೀರಿನ ನಕಲಿ ಯಮುನಾ ಘಾಟ್ ಸೃಷ್ಟಿಸುತ್ತಿದೆ ಎಂದು ವಿರೋಧ ಪಕ್ಷ ಆಮ್ ಆದ್ಮಿ ಪಕ್ಷ(AAP) ಭಾನುವಾರ(ಅ. 26) ಆರೋಪಿಸಿದೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ದೆಹಲಿ ಎಎಪಿ ಅಧ್ಯಕ್ಷ ಸೌರಭ್ ಭಾರದ್ವಾಜ್, ಬಿಜೆಪಿ ಭಕ್ತರಿಗೆ ಮೋಸ ಮಾಡುತ್ತಿದೆ. ಬಿಹಾರದಲ್ಲಿ ಅಧಿಕಾರ ಹಿಡಿಯುವ ಹತಾಶ ಪ್ರಯತ್ನದಲ್ಲಿ ದೆಹಲಿಯ ಲಕ್ಷಾಂತರ ಪೂರ್ವಾಂಚಲಿಗಳ ಜೀವನದ ಜೊತೆ ಆಟವಾಡುತ್ತಿದೆ. ಪ್ರಧಾನಿ ಮೋದಿಗಾಗಿ ವಾಸುದೇವ್ ಘಾಟ್‌ನಲ್ಲಿ ಫಿಲ್ಟರ್ ಮಾಡಿದ ನೀರಿನಿಂದ ತುಂಬಿದ ನಕಲಿ ಯಮುನಾ ಘಾಟ್ ಅನ್ನು ನಿರ್ಮಿಸಲಾಗಿದೆ. ಭಕ್ತರು ಕಲುಷಿತ ನದಿಯಲ್ಲಿ ನಿಲ್ಲಬೇಕಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಕಲಿ ಘಾಟ್‌ಗೆ ದೆಹಲಿಯ ಕುಡಿಯುವ ನೀರನ್ನು ಪೂರೈಸುವ ವಜೀರಾಬಾದ್ ನೀರು ಸಂಸ್ಕರಣಾ ಘಟಕದ ಪೈಪ್‌ಲೈನ್ ಮೂಲಕ ನೀರನ್ನು ತೆಗೆದುಕೊಳ್ಳಲಾಗಿದೆ. ಹಿಂದಿನ ಎಎಪಿ ಸರ್ಕಾರವನ್ನು ನಿಂದಿಸಿ, ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದ ಜಲ ಸಚಿವ ಪರ್ವೇಶ್ ವರ್ಮಾ ನೊರೆಯನ್ನು ತೆರವುಗೊಳಿಸುವ ಬದಲು ಈಗ ಅದೇ ರಾಸಾಯನಿಕವನ್ನು ಯಮುನಾ ನದಿಗೆ ಸಿಂಪಡಿಸುತ್ತಿದ್ದಾರೆ. ಬಿಜೆಪಿ ಒಂದು ಸುಳ್ಳು ಮರೆಮಾಚಲು ಸಾವಿರ ಸುಳ್ಳು ಹೇಳುತ್ತಿದೆ ಎಂದು ಕಿಡಿಕಾರಿದ್ದಾರೆ.
ಯಮುನಾ ನದಿ ನೀರು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಹೇಳಿದೆ. ಆದರೂ ಬಿಜೆಪಿ ನಾಯಕರು ಫೋಟೋ ತೆಗೆಯುವಿಕೆ ಮತ್ತು ನೊರೆಯನ್ನು ಮರೆಮಾಡಲು ರಾಸಾಯನಿಕಗಳನ್ನು ಸಿಂಪಡಿಸುವಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಆಪ್ ಆರೋಪಕ್ಕೆ ಬಿಜೆಪಿ ತಿರುಗೇಟು
ನಕಲಿ ಯಮುನಾ ಘಾಟ್ ಸೃಷ್ಟಿ ಬಗೆಗಿನ ಎಎಪಿ ಆರೋಪಕ್ಕೆ ತಿರುಗೇಟು ನೀಡಿರುವ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ, ಇಂದು ದೆಹಲಿಯ ಜನ ಮತ್ತು ಇಡೀ ದೇಶ ಆಮ್ ಆದ್ಮಿ ಪಕ್ಷದ ರಾಜಕೀಯ ಹತಾಶೆಯ ನಾಚಿಕೆಗೇಡಿನವನ್ನು ನೋಡಿದೆ ಎಂದು ತಿರುಗೇಟು ನೀಡಿದ್ದಾರೆ.
ಯಮುನಾ ನದಿಯ ದಡದಲ್ಲಿರುವ ನೈಸರ್ಗಿಕ ವಾಸುದೇವ್ ಘಾಟ್ ಅನ್ನು ಸ್ವಚ್ಛಗೊಳಿಸಲು ಮತ್ತು ಅಲ್ಲಿ ಶುದ್ಧ ನೀರಿನ ಲಭ್ಯತೆಗೆ ಎಎಪಿ ನಾಯಕ ಸೌರಭ್ ಭಾರದ್ವಾಜ್ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಜನರು ನೋಡಿದ್ದಾರೆ. 2018 ರಿಂದ 2024 ರವರೆಗೆ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಯಮುನಾ ನದಿಯ ದಡದಲ್ಲಿ ಛಠ್ ಪೂಜೆಯನ್ನು ನಿಷೇಧಿಸಿದ್ದರು. ಈಗ ರೇಖಾ ಗುಪ್ತಾ ಅವರ ಸರ್ಕಾರವು ಯಮುನಾದ ಮೂಲಭೂತ ಶುಚಿಗೊಳಿಸುವಿಕೆಯನ್ನು ಪೂರ್ಣಗೊಳಿಸಿ, ಕೇವಲ ಎಂಟು ತಿಂಗಳಲ್ಲಿ ಭಕ್ತರಿಗೆ ಛತ್ ಆಚರಣೆಗಳನ್ನು ಮಾಡಲು ನೈಸರ್ಗಿಕ ಘಾಟ್‌ಗಳು ಲಭ್ಯವಾಗುವಂತೆ ಮಾಡಿದಾಗ, ಅವರು ಗದ್ದಲ ಎಬ್ಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)