ಡಿಜೆ ಹಳ್ಳಿ ಗಲಭೆಗೆ ಆರೋಪಿಗಳು ಏನೇನು ಬಳಸಿದ್ರು?

DJ Halli Riots
Published on

ಬೆಂಗಳೂರು: ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ದುಷ್ಕರ್ವಿುಗಳು ಗಲಭೆ ವೇಳೆ ಬೆಂಕಿ ಹಚ್ಚಲು ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಜತೆ ರಾಸಾಯನಿಕ ಪುಡಿ ಹಾಗೂ ಪೆಟ್ರೋಲ್​ನಲ್ಲಿ ಅದ್ದಿದ ಬಟ್ಟೆ ಬಳಸಿರುವುದು ವಿಧಿವಿಜ್ಞಾನ ಪ್ರಯೋಗಾಲಯ (ಎಫ್​ಎಸ್​ಎಲ್) ತಂಡದ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.

ಆ.11ರ ಗಲಭೆ ಪ್ರಕರಣ ಸಂಬಂಧ ಸಾಕ್ಷ್ಯಾಧಾರ ಕಲೆ ಹಾಕುವ ಸಲುವಾಗಿ ಎಫ್​ಎಸ್​ಎಲ್ ತಜ್ಞರು ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ, ಕಾವಲ್​ಭೈರಸಂದ್ರದಲ್ಲಿ ಮೂರು ದಿನಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೊಲೀಸ್ ಠಾಣೆ, ಶಾಸಕರ ಮನೆ, ರಸ್ತೆಬದಿ ಸುಟ್ಟಿರುವ ವಾಹನ, ಸ್ಥಳೀಯ ನಿವಾಸಿಗರ ಮನೆಗಳು ಸೇರಿ ಗಲಭೆಯಿಂದ ನಾಶವಾಗಿರುವ ಪ್ರತಿ ಸ್ಥಳಕ್ಕೆ ಭೇಟಿ ಕೊಟ್ಟು ಸೂಕ್ಷ್ಮವಾಗಿ ಮಾಹಿತಿ ಕಲೆ ಹಾಕಿದ್ದರು.

ದುಷ್ಕರ್ವಿುಗಳು ನಡೆಸಿರುವ ಪೂರ್ವಯೋಜಿತ ಕೃತ್ಯಕ್ಕೆ ಸಾಕಷ್ಟು ಸಾಕ್ಷ್ಯಗಳು ಎಫ್​ಎಸ್​ಎಲ್ ತಜ್ಞರಿಗೆ ದೊರಕಿವೆ. ರಾಸಾಯನಿಕ ಮಿಶ್ರಿತ ಪುಡಿ ಬಳಸಿರುವುದು ಗೊತ್ತಾಗಿದೆ. ಘಟನಾ ಸ್ಥಳದಲ್ಲಿದ್ದ 12 ವಾಹನಗಳ ಮೇಲ್ಮೈ ಪರೀಕ್ಷೆ ಮಾಡಿ, ಸಿಕ್ಕ ವಸ್ತುಗಳ ಕಣಗಳನ್ನು ಸಂಗ್ರಹಿಸಿ ತಪಾಸಣೆಗೆ ಒಳಪಡಿಸಿದಾಗ 1 ಕಡೆ ಪೆಟ್ರೋಲ್ ಮತ್ತೊಂದು ಕಡೆ ಡೀಸೆಲ್ ಹಾಗೂ ಸೀಮೆಎಣ್ಣೆ ತಂದು ವಾಹನಗಳಿಗೆ ಬೆಂಕಿ ಹಚ್ಚಿರುವುದು ಖಚಿತವಾಗಿದೆ.

ಅಷ್ಟೇ ಅಲ್ಲದೆ, ಆ.11ರ ರಾತ್ರಿ ದೊಡ್ಡ ಮಟ್ಟದಲ್ಲಿ ಗಲಭೆ ನಡೆಸಲು ಕಿಡಿಗೇಡಿಗಳು ಸಂಚು ರೂಪಿಸಿದ್ದರು. ಗಾಜಿನ ಶೀಷೆಗಳಲ್ಲಿ ಪೆಟ್ರೋಲ್-ಡೀಸೆಲ್ ಹಾಗೂ ಸೀಮೆಎಣ್ಣೆ ತಂದಿದ್ದಾರೆ. ಹರಿತವಾದ ಆಯುಧ ಬಳಸಿ ದ್ವಿಚಕ್ರ ವಾಹನಗಳ ಪೆಟ್ರೋಲ್ ಟ್ಯಾಂಕ್ ಮೇಲ್ಭಾಗ ಚಿಕ್ಕದಾಗಿ ತೂತು ಮಾಡಿ ಚಿಕ್ಕ ಚಿಕ್ಕ ಬಟ್ಟೆಗೆ ಪೆಟ್ರೋಲ್ ಸುರಿದುಕೊಂಡಿದ್ದರು. ಏಕಾಏಕಿ ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿ ಪೊಲೀಸ್ ವಾಹನ ಹಾಗೂ ಸಾರ್ವಜನಿಕ ವಾಹನಗಳಿಗೆ ಬೆಂಕಿ ಹಚ್ಚಿ ಭಸ್ಮ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ವರೆಗಿನ ವರದಿಯನ್ನು ಎಫ್​ಎಸ್​ಎಲ್ ತಜ್ಞರು ತನಿಖಾಧಿಕಾರಿಗಳಿಗೆ ಒಪ್ಪಿಸಲು ಸಿದ್ದತೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net