ಕಾರವಾರ: ಜಿಲ್ಲೆಯಲ್ಲಿ ಒಂದುವರೆ ವರ್ಷದಲ್ಲಿ ಸಾವಿರಕ್ಕೂ ಅಧಿಕ ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ (CHD) ಇರುವುದು ಪತ್ತೆಯಾಗಿದೆ. 55 ರಷ್ಟು ವಿದ್ಯಾರ್ಥಿಗಳಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ರಾಷ್ಟ್ರೀಯ ಬಾಲ ಸ್ವಾಸ್ತ್ಯ ಕಾರ್ಯಕ್ರಮ(ಆರ್‌ಬಿಎಸ್‌ಕೆ)ದಡಿ ಶೂನ್ಯದಿಂದ 18 ವರ್ಷದೊಳಗಿನ ಮಕ್ಕಳ ನಿರಂತರ ಆರೋಗ್ಯ ತಪಾಸಣೆಯನ್ನು ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜ್‌ಗಳಲ್ಲಿ ನಡೆಸಲಾಗುತ್ತಿದೆ. ಮಕ್ಕಳಲ್ಲಿರುವ ಸಾಮಾನ್ಯ ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿದೆ.
2023-24 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 2.75 ಲಕ್ಷ ಹಾಗೂ ಈ ವರ್ಷ ಅಕ್ಟೋಬರ್‌ವರೆಗೆ 1.65 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದೆ. ಅದರಲ್ಲಿ ಮುಖ್ಯವಾಗಿ, ಹಲ್ಲಿನ ಸಮಸ್ಯೆ, ಕಣ್ಣಿನ ಸಮಸ್ಯೆಗಳು, ಚರ್ಮ ರೋಗ ಸೇರಿ ವಿವಿಧ ಆರೋಗ್ಯ ಸಂಬಂಮಧಿ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಚಿಕಿತ್ಸೆ ನೀಡುವ ಕಾರ್ಯವನ್ನು ಆರೋಗ್ಯ ಇಲಾಖೆ ನೇತೃತ್ವದಲ್ಲಿ ಆರ್‌ಬಿಎಸ್‌ಕೆ ತಂಡ ಕೈಗೊಂಡಿದೆ. ಆರ್‌ಬಿಎಸ್‌ಕೆ ವರದಿಯಂತೆ 1019 ಮಕ್ಕಳಲ್ಲಿ ಹೃದಯ ಸಂಬಂಧಿ ದೋಷಗಳು CHD ಕಾಣಿಸಿಕೊಂಡಿರುವುದು ಆತಂಕಕಾರಿಯಾಗಿದೆ.
55 ಮಕ್ಕಳಿಗೆ CHD ಶಸ್ತ್ರ ಚಿಕಿತ್ಸೆ
2023-24 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 464 ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು(CHD) ಕಾಣಿಸಿಕೊಂಡಿದ್ದವು. ಅದರಲ್ಲಿ 203 ಮಕ್ಕಳಿಗೆ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ಮಾಡಿಸಿಕೊಳ್ಳುವಂತೆ ಶಿಫಾರಸು ಮಾಡಲಾಗಿತ್ತು. ಅದಲ್ಲಿ 168 ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಇಲ್ಲದೇ ಮಾತ್ರೆ ಹಾಗೂ ಇತರ ಚಿಕಿತ್ಸೆಗಳ ಮೂಲಕ ಗುಣಪಡಿಸಬಹುದು ಎಂದು ಗುರುತಿಸಲಾಗಿದೆ. 35 ಮಕ್ಕಳಿಗೆ ಹೃದಯದ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ.
ಈ ವರ್ಷ ಏಪ್ರಿಲ್‌ನಿಂದ ಇದುವರೆಗೆ 555 ಮಕ್ಕಳಲ್ಲಿ ಹೃದಯ ಸಂಬಂಧಿ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿದ್ದು, 407 ಮಕ್ಕಳನ್ನು ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲು ಶಿಫಾರಸು ಮಾಡಲಾಗಿತ್ತು. 387 ಮಕ್ಕಳಿಗೆ ಹೃದಯದ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಹುಟ್ಟುವಾಗಿನಿಂದಲೇ ಹೃದಯದ ಸಮಸ್ಯೆ ಕಾಣಿಸಿಕೊಂಡ ಮಕ್ಕಳ ಸಂಖ್ಯೆ ಹೆಚ್ಚಿರುತ್ತದೆ. ಅನುವಂಶಿಕವಾಗಿ, ಅಥವಾ ಭ್ರೂಣಾವಸ್ಥೆಯಲ್ಲಿನ ಸಮಸ್ಯೆಗಳಿಂದ ಇವುಗಳು ಬರಬಹುದು ಎಂಬುದು ತಜ್ಞ ವೈದ್ಯ ಅಭಿಪ್ರಾಯ.
410 ಮಕ್ಕಳಲ್ಲಿ ನರ ಸಂಬಂಧಿ ದೌರ್ಬಲ್ಯಗಳು
ಇದೇ ಅವಧಿಯಲ್ಲಿ 410 ಮಕ್ಕಳಲ್ಲಿ ನರ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಅವುಗಳಲ್ಲಿ ಗಂಭೀರ ಸಮಸ್ಯೆ ಇರುವ ಇಬ್ಬರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಆರ್‌ಬಿಎಸ್‌ಕೆ ಅಡಿ ನಾವು ಹೃದಯ, ನರ ರೋಗ ಮುಂತಾದ ತಜ್ಞ ವೈದ್ಯರನ್ನು ಕರೆಸಿ ಶಿಬಿರಗಳನ್ನು ನಡೆಸಿದ್ದೇವೆ. 21 ಮಕ್ಕಳಿಗೆ ಸೀಳು ತುಟಿ ಶಸ್ತç ಚಿಕಿತ್ಸೆಗಳನ್ನೂ ಮಾಡಿಸಲಾಗಿದೆ ಎಂದು ಆರ್‌ಸಿಎಚ್ ಅಧಿಕಾರಿ ಡಾ.ನಟರಾಜ್ ಮಾಹಿತಿ ನೀಡಿದ್ದಾರೆ. ಕಾಯಿಲೆಗಳು ಹೆಚ್ಚಾಗಿವೆ ಎಂದಲ್ಲ. ಈಗ ನಿಯಮಿತವಾಗಿ ರೋಗಗಳನ್ನು ಪತ್ತೆ ಮಾಡಲಾಗುತ್ತಿದೆ. ಅದಕ್ಕಾಗಿ ಇಷ್ಟು ಸಂಖ್ಯೆಯಲ್ಲಿ ಮಕ್ಕಳಲ್ಲಿ ವಿವಿಧ ಕಾಯಿಲೆಗಳು ಕಾಣಿಸುತ್ತಿವೆ ಎಂದು ಅವರು ವಿವರಿಸುತ್ತಾರೆ.
ಭ್ರೂಣಾವಸ್ಥೆಯಲ್ಲಿ ಹೃದಯದ ಬೇರೆ ಬೇರೆ ಭಾಗಗಳು ಬೆಳವಣಿಗೆ ಹೊಂದುವಾಗ ಉಂಟಾಗುವ ಸಮಸ್ಯೆಯಿಂದ ಮಕ್ಕಳಲ್ಲಿ ಹೃದಯ ಸಂಬಂಧಿ CHD ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಹೃದಯದಲ್ಲಿ ತೂತು ಹೆಚ್ಚು ಮಕ್ಕಳಲ್ಲಿ ಕಾಣುತ್ತದೆ. ಮಕ್ಕಳು ಅತ್ತಾಗ ಮೈ ನೀಲಿಯಾಗುವುದು. ಆಡುವಾಗ ಬೇಗನೇ ಸುಸ್ಥಾಗುವುದು. ಹಗಲಲ್ಲಿ ಮತ್ತೆ, ಮತ್ತೆ ನೆಗಡಿ, ಕೆಮ್ಮು ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಪಲ್ಸ್ ಆಕ್ಸಿಮೀಟರ್ ಮೂಲಕ ಮೊದಲು ಇದನ್ನು ಪತ್ತೆ ಮಾಡಬಹುದು, ನಂತರ ಎಕ್ಸ್ರೇ, ಇಕೋ ಕಾರ್ಡಿಯೋಗ್ರಾಂ ಮುಂತಾದ ತಪಾಸಣೆಗಳ ಮೂಲಕ ಸಮಸ್ಯೆಯನ್ನು ದೃಢಪಡಿಸಿಕೊಂಡು ಅಗತ್ಯವಿದ್ದಲ್ಲಿ ಎಂಜಿಯೋಗ್ರಫಿ ಮಾಡಲಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಸಿಎಚ್‌ಡಿ ಅಥವಾ ಸಣ್ಣ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಲ್ಲಿ ಅದನ್ನು ಬಗೆಹರಿಸಿಕೊಳ್ಳದಿದ್ದರೆ, ಮುಂದೆ ಗಂಭೀರ ಸಮಸ್ಯೆ ಉಂಟಾಗಬಹುದು.
ಡಾ.ರಾಜಕುಮಾರ ಮರೋಳ
ಕ್ರಿಮ್ಸ್, ಮಕ್ಕಳ ವಿಭಾಗದ ಮುಖ್ಯಸ್ಥ
ನಮ್ಮ ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೆ ಎರಡರಂತೆ 22 ಆರ್‌ಬಿಎಸ್‌ಕೆ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಒಂದು ತಂಡದಲ್ಲಿ ಇಬ್ಬರು ವೈದ್ಯರು, ಒಬ್ಬ ಸ್ಟಾಪ್ ನರ್ಸ್ ಹಾಗೂ ಒಬ್ಬ ಕಣ್ಣಿನ ತಪಾಸಕರು ಇರುತ್ತಾರೆ. ಅವರಿಗೆ ವಾಹನ ನೀಡಲಾಗಿದೆ. ತಂಡಗಳು ಇಡೀ ವರ್ಷ ಪೂರ್ವ ಯೋಜಿತ ವೇಳಾ ಪಟ್ಟಿಯಂತೆ ಸರ್ಕಾರಿ ಹಾಗೂ ಅನುದಾನಿತ ಅಂಗನವಾಡಿ, ಶಾಲೆ, ಹೈಸ್ಕೂಲ್, ಹಾಗೂ ಪಿಯು ಕಾಲೇಜ್‌ಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಅದನ್ನು ಪೋರ್ಟಲ್ ಒಂದರಲ್ಲಿ ನಮೂದಿಸುತ್ತವೆ. ಗುರುತಾಗುವ ರೋಗಗಳಿಗೆ ಸಂಬಂಧಿಸಿ ಎಲ್ಲ ಸಮಸ್ಯೆಗಳಿಗೆ ಪಿಎಚ್‌ಸಿ, ತಾಲೂಕು, ಜಿಲ್ಲೆ ಹಾಗೂ ವಿಶೇಷ ಆಸ್ಪತ್ರೆಗಳಿಗೆ ಮಕ್ಕಳನ್ನು ಕರೆದೊಯ್ಯಲು ಶಿಫಾರಸು ಮಾಡಲಾಗುತ್ತದೆ. ಮತ್ತು ಮಕ್ಕಳು ಚಿಕಿತ್ಸೆ ಪಡೆದ ಬಗ್ಗೆ ನಿರಂತರ ಫಾಲೋ ಅಪ್ ಮಾಡಲಾಗುತ್ತದೆ. 5 ಲಕ್ಷ ರೂ.ವರೆಗೂ ಮಕ್ಕಳಿಗೆ ಉಚಿತ ಚಿಕಿತ್ಸೆ ಸರ್ಕಾರದಿಂದ ದೊರೆಯಲಿದೆ.
ಡಾ.ನೀರಜ್ ಬಿ.ವಿ.
ಡಿಎಚ್‌ಒ, ಕಾರವಾರ
ಇದನ್ನೂ ಓದಿ: ಶಿರಸಿ ಪ್ರತ್ಯೇಕ ಜಿಲ್ಲೆಗಾಗಿ ಸಮಾನ ಮನಸ್ಕರ ಸಭೆ 16ರಂದು
https://www.vijayavani.net/a-like-minded-meeting-for-shirsi-separate-district-on-16th