ಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಿಂದಲೂ ಜನ ಬೆಂಬಲ, ಆಂದೋಲನ ಆರಂಭಿಸಲು ನಿರ್ಧರಿಸಿದ್ದೇವೆ. ಕದಂಬ ಕನ್ನಡ ಜಿಲ್ಲೆ ನಿರ್ವಣಕ್ಕಾಗಿ ನ. 16ರಂದು ನಗರದ ನೆಮ್ಮದಿ ರಂಗ ಮಂದಿರದಲ್ಲಿ ಸಮಾನ ಮನಸ್ಕರ ಸಭೆ ಕರೆಯಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಜಿಲ್ಲೆಗೆ ಒಂದನ್ನಷ್ಟೇ ಮಂಜೂರು ಮಾಡುವ ಕಾರಣ ಶಿರಸಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಿ ಆಸ್ಪತ್ರೆ ಮಂಜೂರು ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
ಔದ್ಯೋಗಿಕ ವಲಸೆ, ಪ್ರತಿಭಾ ಪಲಾಯನ ಜಿಲ್ಲೆಯಲ್ಲಿ ಮುಂದುವರಿದಿದೆ. ಸುಸಜ್ಜಿತ ಟ್ರಾಮಾ ಸೆಂಟರ್ ಇಲ್ಲಿಲ್ಲ, ಅಪಘಾತದಂತ ಸಂದರ್ಭದಲ್ಲಿ ಪೆಟ್ಟು ಬಿದ್ದು ರಕ್ತಸ್ರಾವ ಆಗುತ್ತಿದ್ದರೆ ಜಿಲ್ಲೆಯಲ್ಲಿ ಪರಿಶೀಲಿಸುವ ಒಬ್ಬ ನ್ಯೂರೋ ಸರ್ಜನ್ ಇಲ್ಲ. ಜೀವ ಉಳಿಸಿಕೊಳ್ಳಲು ಕನಿಷ್ಠ 3 ತಾಸು ಪ್ರಯಾಣ ಮಾಡಬೇಕು ಹಾಗೂ ಮಾರ್ಗ ಮಧ್ಯೆ ಸಾವು ಸಾಮಾನ್ಯವಾಗಿದೆ ಎಂದರು.
ಜಿಲ್ಲಾ ಕೇಂದ್ರ ಕಾರವಾರಕ್ಕೆ ಮುಂಡಗೋಡ ತಾಲೂಕಿನ ಬಡ ರೈತನೊಬ್ಬ ಹೋಗಿ ಕಚೇರಿ ಕೆಲಸ ಕಾರ್ಯಗಳನ್ನು ಮುಗಿಸಿ ಬರಬೇಕೆಂದರೆ ಎರಡು ದಿನ ವ್ಯಯಿಸಬೇಕಾಗುತ್ತದೆ. ಮನುಷ್ಯನ ಮೂಲ ಅಗತ್ಯಗಳನ್ನು ಪಡೆಯುವುದರಿಂದ ಜಿಲ್ಲೆಯ ಜನ ವಂಚಿತರಾಗುತ್ತಿದ್ದಾರೆ. ನಾವು ಈ ಮೂಲಭೂತ ಅಗತ್ಯಗಳಿಗಾಗಿ ಹೋರಾಟ ಮಾಡಿದರೂ ಯಾವ ಸರ್ಕಾರವೂ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. ಜಿಲ್ಲೆ ವಿಶಾಲವಾಗಿರುವ ಕಾರಣ ಅನುದಾನ ಹಂಚಿಕೆಯೂ ಸಮರ್ಪಕವಾಗಿ ಆಗುವುದಿಲ್ಲ. ಅದಕ್ಕಾಗಿ ನಾವು ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸುವುದು ಅನಿವಾರ್ಯವಾಗಿದೆ. ಹೀಗಾಗಿ ಸಮಾನ ಮನಸ್ಕರ ಸಭೆ ಕರೆದು ರ್ಚಚಿಸಿ ಮುಂದೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ನಡೆಸಲಿದ್ದೇವೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಸಿ.ಎಫ್. ಈರೇಶ, ಪ್ರಮುಖರಾದ ವಿ.ಎಂ. ಭಟ್, ಶೋಭಾ ನಾಯ್ಕ, ಎಂ.ಎಂ. ಭಟ್, ಚಿದಾನಂದ ಹರಿಜನ, ಮಹಾದೇವ ಚಲುವಾದಿ ಇತರರಿದ್ದರು.