

ಕಾಸರಗೋಡು: ವಿಶ್ವಜ್ಞಾನ ಸಂಘ ಟ್ರಸ್ಟ್ ನೇತೃತ್ವದಲ್ಲಿ ವಿಶ್ವದಲ್ಲಿಯೇ ಮೊದಲ ಬಾರಿಗೆ ಕಾಸರಗೋಡು ಚೌಕಿ ಕಾವುಗೋಳಿ ಶ್ರೀ ಶಿವ ದೇವಾಲಯ ವಠಾರದಲ್ಲಿ ಚತುರ್ವೇದ ಜ್ಞಾನ ಮಹಾಯಜ್ಞ 2025 ಜನವರಿ 2ರಿಂದ 11ರವರೆಗೆ ನಡೆಯಲಿದ್ದು, ಸಂಘಟನಾ ಸಮಿತಿ ರಚನಾ ಸಭೆ ಕಾಸರಗೋಡು ನಗರ ಸಭಾಂಗಣದಲ್ಲಿ ನಡೆಯಿತು.
ಕೇರಳದ ವಿವಿಧ ಜಿಲ್ಲೆಗಳ ವಿವಿಧ ಸಮುದಾಯ ಸಂಘಟನೆಗಳು, ದೇವಸ್ಥಾನ, ದೈವಸ್ಥಾನ, ತರವಾಡು ಮತ್ತು ವಿವಿಧ ಟ್ರಸ್ಟಿಗಳು, ತಂತ್ರಿ ವೈದಿಕರು ಮತ್ತು ಭಕ್ತರ ಸಮ್ಮುಖದಲ್ಲಿ 1001 ಜನರ ಸಮಿತಿ ಘೋಷಿಸಲಾಯಿತು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಿನ್ಮಯ ಮಿಷನ್ ಕೇರಳದ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಮಹಾಯಜ್ಞದ ವೆಬ್ಸೈಟ್ ಲೋಕಾರ್ಪಣೆಗೈದರು.
ಜಿ.ಕೆ.ಸುರೇಶ್ ಬಾಬು, ಸ್ವಾಗತ ಸಮಿತಿ ನಿಯುಕ್ತ ಅಧ್ಯಕ್ಷ ವಿಜಯನ್ ಕರಿಪ್ಪೊಡಿ, ಆರೆಸ್ಸೆಸ್ ಕುಟುಂಬ ಪ್ರಬೋಧನ್ ರಾಷ್ಟ್ರೀಯ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಹಿಂದು ಐಕ್ಯವೇದಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಪಿ.ಹರಿದಾಸ್, ನೀಲೇಶ್ವರಂ ಕೋವಿಲಕಂ ಮನವರ್ಮ, ಎರಿಯಕೋಟ ಕಯಗಂ ಚಂದ್ರಶೇಖರ ಕಾರ್ನವರ್, ರಘುನಾಥ ಚೈತನ್ಯ, ರವೀಶ ತಂತ್ರಿ, ಬ್ರಹ್ಮಶ್ರೀ ಲಕ್ಷ್ಮೀನಾರಾಯಣ ಪಟ್ಟೇರಿ, ಶಶಿಧರ, ಗಣೇಶ ಅರಮಂಗಾನಂ, ಉಮೇಶ ಕಡಪ್ಪುರ, ಸುರೇಶ ಬಾಬು ಕಾನತ್ತೂರು, ಗಣೇಶ ಮಾವಿನಕಟ್ಟೆ ಉಪಸ್ಥಿತರಿದ್ದರು.
ಸ್ವಾಗತ ಸಮಿತಿಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅಧ್ಯಕ್ಷರಾಗಿ ವಿಜಯನ್ ರಾಮನ್, ಪ್ರಧಾನ ಕಾರ್ಯದರ್ಶಿಯಾಗಿ ಜಯಚಂದ್ರನ್, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಟಿ.ಶಿವಾನಂದನ್ ವೈದ್ಯ, ಕಾರ್ಯಾಧ್ಯಕ್ಷರಾಗಿ ಸುಧೀರ್ ಶೆಟ್ಟಿ ಎಣ್ಮಕಜೆ, ಕೆ.ಕೆ.ನಾರಾಯಣನ್, ಡಾ.ಜಯಪ್ರಕಾಶನಾರಾಯಣ್ ತೊಟ್ಟೆತ್ತೋಡಿ, ಪಿ.ಮೀರಾ ಆಳ್ವ, ಶಾಜಿ ಎಸ್.ಪಿ, ಉಪೇಂದ್ರ ಕೋಟೆಕಣಿ, ಜಯಕೃಷ್ಣನ್, ಪ್ರಧಾನ ಸಂಚಾಲಕರಾಗಿ ಲಕ್ಷ್ಮೀನಾರಾಯಣ ಪಟ್ಟೇರಿ, ಕರುಣಾಕರನ್ ನೀಲೇಶ್ವರ, ವಿಷ್ಣು ಅಡಿಗ ಉದುಮ, ಗಣೇಶ ಮಾವಿನಕಟ್ಟೆ, ಸುರೇಶ್ಬಾಬು ಕಾನತ್ತೂರು, ಕೋಶಾಧಿಕಾರಿಯಾಗಿ ರಾಮಕೃಷ್ಣನ್ ತಳಿಪರಂಬ ಮತ್ತು ರವೀಶ್ ತಂತ್ರಿ ಕುಂಟಾರು ಸೇರಿದಂತೆ 1001 ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಯಿತು.
ಚತುರ್ವೇದ ಜ್ಞಾನ ಮಹಾಯಜ್ಞದ ಅಂಗವಾಗಿ ದೇವಾಲಯ ವಠಾರದಲ್ಲಿ ನಕ್ಷತ್ರ ವನ ನಿರ್ಮಾಣಕ್ಕಾಗಿ ಸಸಿಗಳ ನೆಡುವ ಕಾರ್ಯಕ್ರಮ ಈಗಾಗಲೇ ಪೂರ್ತಿಗೊಂಡಿದೆ. ತಮಿಳುನಾಡಿನ ಚಿದಂಬರಂ ಶ್ರೀ ನಟರಾಜ ದೇವಸ್ಥಾನದ ಪ್ರಧಾನ ಅರ್ಚಕ ಮಹಾದೇವ ದೀಕ್ಷಿತ್ ಮುಖ್ಯ ಪೌರೋಹಿತ್ಯ ವಹಿಸುವರು. ನಾಲ್ಕು ಯಜ್ಞಶಾಲೆಗಳಲ್ಲಿ 16 ಸ್ಥಳಗಳಲ್ಲಿ ಹತ್ತು ದಿನಗಳ ಕಾಲ ಯಜ್ಞ ನಡೆಯಲಿದೆ. ಐದನೇ ಯಜ್ಞಶಾಲೆಯಲ್ಲಿ ವೇದ ಮಂತ್ರಗಳೊಂದಿಗೆ ಹೋಮಪೂಜಾದಿ ಕಾರ್ಯ ನೆರವೇರಲಿವೆ. ಯಜ್ಞದ ಅಧ್ಯಯನ ಮತ್ತು ಸಂಶೋಧನೆಗಾಗಿ ದೇಶ-ವಿದೇಶದ ವಿಜ್ಞಾನಿಗಳು, ವಿಶ್ವದ ವಿವಿಧ ದೇಶಗಳಿಂದ ವೈದಿಕ ಪಂಡಿತರು, ವಿವಿಧ ವಿಶ್ವವಿದ್ಯಾನಿಲಯದಿಂದ ಸಂಶೋಧನಾ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ.