

ನವದೆಹಲಿ: ಚಾಟ್ಜಿಪಿಟಿ ( ChatGPT ) ಟೆಕ್ನಾಲಜಿ ಹಲವು ವಿಧಗಳಲ್ಲಿ ಜನರಿಗೆ ಪ್ರಯೋಜನಕಾರಿಯಾಗಿದೆ. ಆದರೆ, ಅದನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು. ಇಲ್ಲದಿದ್ದರೆ, ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ದೆಹಲಿ ಮೂಲದ ಕಂಪನಿಯೊಂದರ ಸಿಇಒ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಾಟ್-ಜಿಪಿಟಿ ( ChatGPT ) ಸಹಾಯದಿಂದ ಬರೆದ ನಂತರವೂ ಪ್ರೂಫ್ ರೀಡಿಂಗ್ ಏಕೆ ಮುಖ್ಯ ಎಂಬುದನ್ನು ಜನರಿಗೆ ವಿವರಿಸಿದ್ದಾರೆ.
ಎಂಟ್ರೇಜ್ ಕಂಪನಿಯ ಸಿಇಒ ಅನನ್ಯ ನಾರಂಗ್ ಅವರು, ತಮ್ಮ ಕಂಪನಿಯ ಕೆಲಸಕ್ಕೆ ಅಪ್ಲೆಕೇಶನ್ ಹಾಕಿದ್ದ ಉದ್ಯೋಗಾಕಾಂಕ್ಷಿಯ ಜಾಬ್ ರೆಸ್ಯೂಮ್ ಸ್ಕ್ರೀನ್ಶಾಟ್ ಅನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಅದರಲ್ಲಿರುವ ತಪ್ಪನ್ನು ಎತ್ತಿ ತೋರಿಸಿದ್ದಾರೆ. ಅದನ್ನು ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದು, ಹೀಗೂ ರೆಸ್ಯೂಮ್ ಮಾಡುತ್ತಾರಾ ಎಂದಿದ್ದಾರೆ. ಸ್ಕ್ರೀನ್ಶಾಟ್ ನೋಡಿದರೆ, ಬಹುಶಃ ಅಪ್ಲಿಕೇಶನ್ ಹಾಕಿರುವ ವ್ಯಕ್ತಿ, ರೆಸ್ಯೂಮ್ ಅನ್ನು ಸರಿಯಾಗಿ ಓದದೆ ಕಾಪಿ ಮತ್ತು ಪೇಸ್ಟ್ ಮಾಡಿರಬಹುದು ಎಂದು ತೋರುತ್ತದೆ.
ರೆಸ್ಯೂಮ್ನಲ್ಲಿ ವೈಯಕ್ತಿಕ ಮಾಹಿತಿಯನ್ನು ಬದಲಿಸುವ ಟೆಂಪ್ಲೇಟ್ ಪ್ಲೇಸ್ಹೋಲ್ಡರ್ಗಳನ್ನು ಸ್ಕ್ರೀನ್ಶಾಟ್ನಲ್ಲಿ ನೋಡಬಹುದು. ನಿಮ್ಮ ಕೌಶಲ್ಯವನ್ನು ಉಲ್ಲೇಖಿಸಿ ಎಂದು ಚಾಟ್ಜಿಪಿಟಿ ಬರೆದಿದೆ. ಆದರೆ, ಅದರ ವಿವರಣೆಯನ್ನೇ ನೀಡಿಲ್ಲ. ನಿಮ್ಮ ಪ್ರಾಜೆಕ್ಟ್ ಮತ್ತು ಅನುಭವದ ಬಗ್ಗೆ ವಿವರಿಸಿ ಎಂದು ಚಾಟ್ಜಿಪಿಟಿ ಬರೆದಿದೆ. ಅದನ್ನು ಸಹ ಹಾಗೇ ಬಿಡಲಾಗಿದೆ. ಅನೇಕ ಸ್ಥಳಗಳಲ್ಲಿ ವೈಯಕ್ತಿಕ ಮಾಹಿತಿಯ ಬದಲಿಗೆ ಕೇವಲ ಟೆಂಪ್ಲೇಟ್ಗಳು ಮಾತ್ರ ಗೋಚರಿಸುತ್ತವೆ.
ಈ ರೆಸ್ಯೂಮ್ ನೋಡಿದ ಎಂಟ್ರೇಜ್ ಕಂಪನಿಯ ಸಿಇಒ ಅನನ್ಯ ನಾರಂಗ್ ಒಂದು ಕ್ಷಣ ಶಾಕ್ ಆಗಿದ್ದಾರೆ. ಅಭ್ಯರ್ಥಿಯು ಚಾಟ್ಜಿಪಿಟಿಯನ್ನು ಅಪ್ಲಿಕೇಶನ್ಗಾಗಿ ಬಳಸಿರುವುದು ಸ್ಪಷ್ಟವಾಗಿದೆ. ಹೀಗಾಗಿ ಜಾಬ್ ರೆಸ್ಯೂಮ್ ಸ್ಕ್ರೀನ್ಶಾಟ್ ಅನ್ನು ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಾನು ಮತ್ತೊಂದು ಜಾಬ್ ಅಪ್ಲಿಕೇಶನ್ ಸ್ವೀಕರಿಸಿದೆ. ನಮ್ಮಲ್ಲಿ ನಿರುದ್ಯೋಗವಿದ್ದರೂ ಆಶ್ಚರ್ಯವಿಲ್ಲ ಎಂದು ಬರೆದಿರುವ ಅನನ್ಯ ನಾರಂಗ್, ಈ ರೀತಿಯ ಅಪ್ಲಿಕೇಶನ್ಗಳಿಗೆ ಹೇಗೆ ಪ್ರತಿಕ್ರಿಯಿಸುವುದು? ಎಂದು ಎಕ್ಸ್ ವೇದಿಕೆಯಲ್ಲಿ ನೆಟ್ಟಿಗರ ಸಲಹೆ ಕೇಳಿದ್ದಾರೆ. ಅನೇಕ ಅಭ್ಯರ್ಥಿಗಳಂತೆ, ಈ ವ್ಯಕ್ತಿಯು ChatGPT ಸಹಾಯದಿಂದ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೂ, ಕಳುಹಿಸುವ ಮುನ್ನ ಮತ್ತೆ ಓದುವ ಯತ್ನವೂ ಮಾಡಲಿಲ್ಲ ಎಂದು ನಾರಂಗ್ ಅವರು ಬೇಸರು ವ್ಯಕ್ತಪಡಿಸಿದರು. ಸದ್ಯ ನಾರಂಗ್ ಅವರ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೇಯಾದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್)