ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಚಿತ್ರದುರ್ಗದ ರೇಣುಕಸ್ವಾಮಿಯನ್ನು ಅತ್ಯಂತ ಕ್ರೂರವಾಗಿ ನಟ ದರ್ಶನ್ ಆಂಡ್ ಗ್ಯಾಂಗ್ ಚಿತ್ರಹಿಂಸೆ ನೀಡಿ ಕೊಂದಿರುವ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರು ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ದರ್ಶನ್ ತಳ್ಳಿದ್ದರಿಂದ ಭಾರಿ ವಾಹನಕ್ಕೆ ರೇಣುಕಸ್ವಾಮಿ ತಲೆ ಬಡಿದು ಪ್ರಜ್ಞೆ ತಪ್ಪಿಬಿದ್ದಿದ್ದ. ಅಷ್ಟಾದ ನಂತರವೂ ಆತನಿಗೆ ದೊಣ್ಣೆ, ರಿಪೀಸ್ ಪಟ್ಟಿಯಿಂದ ಹಲ್ಲೆ ನಡೆಸಿ ಹಗ್ಗದಲ್ಲಿ ಕಟ್ಟಿ ಹಾಕಿದ್ದರು. ಬಳಿಕ ಕಾಲು ಹಿಡಿದು ಕಾಂಪೌಂಡ್ಗೆ
ಬಡಿದಿದ್ದರು. ಇಷ್ಟೆಲ್ಲ ಹಿಂಸೆ ತಾಳಲಾರದೆ ರೇಣುಕಸ್ವಾಮಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ರೇಣುಕಸ್ವಾಮಿಯನ್ನು ಸಂಚು ರೂಪಿಸಿ ಕೊಲೆ ಮಾಡಲಾಗಿದೆ. ಶವ ವಿಲೇವಾರಿ ಮತ್ತು ಸಾಕ್ಷ್ಯಾಧಾರ ನಾಶಪಡಿಸುವ ಜತೆಗೆ ಪೊಲೀಸ್ ತನಿಖೆ ದಿಕ್ಕು ತಪ್ಪಿಸುವುದಕ್ಕೂ ಕ್ರಿಮಿನಲ್ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ. ಬಂಧಿತ 17 ಆರೋಪಿಗಳ ಹೇಳಿಕೆ ಮತ್ತು ಸಾಂರ್ದಭಿಕ ಸಾಕ್ಷ್ಯಾಧಾರ ಸಹ ಪೂರಕವಾಗಿವೆ ಎಂದು ಉಲ್ಲೇಖಿಸಲಾಗಿದೆ.
ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಮನೆ ಕೆಲಸಗಾರ ಪವನ್ ಮೂಲಕ ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರನ್ನು ಸಂರ್ಪಸಿ ರೇಣುಕಸ್ವಾಮಿ ಪತ್ತೆಗೆ ಸೂಚಿಸಿದ್ದರು. ಅನುಕುಮಾರ್ ಜೊತೆಗೂಡಿ ಹುಡುಕಾಟ ಶುರು ಮಾಡಿದ ರಾಘವೇಂದ್ರ, ಮಾಹಿತಿ ಕಲೆ ಹಾಕಿ ಪವನ್ಗೆ
ತಿಳಿಸಿದ್ದ. ಪವಿತ್ರಾಗೌಡ ಮತ್ತು ದರ್ಶನ್ ಸೂಚನೆ ಮೇರೆಗೆ ರೇಣುಕಸ್ವಾಮಿ ಅಪಹರಣಕ್ಕೆ ಸಂಚು ರೂಪಿಸಿದ್ದರು. ಅದರಂತೆ ರೇಣುಕಸ್ವಾಮಿಯನ್ನು ಕರೆದುಕೊಂಡು ಚಿತ್ರದುರ್ಗ ಸರ್ಕಲ್ಗೆ ಬರುವಂತೆ ಅನುಕುಮಾರ್ ಮತ್ತು ಜಗದೀಶ್ಗೆ ಸೂಚಿಸಿದ್ದ. ಅದರಂತೆ ರೇಣುಕಸ್ವಾಮಿಯನ್ನು ಪುಸಲಾಯಿಸಿ ಕರೆತಂದಿದ್ದರು. ಅಷ್ಟೊತ್ತಿಗೆ ಕ್ಯಾಬ್ ಚಾಲಕ ರವಿಕುಮಾರ್ನನ್ನು ಬಾಡಿಗೆಗೆಂದು ಕರೆ ತಂದಿದ್ದ ರಾಘವೇಂದ್ರ, ಚಿತ್ರದುರ್ಗ ಸರ್ಕಲ್ಗೆ
ಬಂದು ರೇಣುಕಸ್ವಾಮಿ ಮತ್ತು ತನ್ನ ಸ್ನೇಹಿತರನ್ನು ಹತ್ತಿಸಿಕೊಂಡು ಬೆಂಗಳೂರಿಗೆ ಬಂದಿದ್ದರು. ತುಮಕೂರು ರಸ್ತೆ 8ನೇ ಮೈಲಿ ಬಳಿ ಬಂದಾಗ ದರ್ಶನ್ ಆಪ್ತ ವಿನಯ್ಗೆ ಕರೆ ಮಾಡಿ ರಾಘವೇಂದ್ರ ಎಲ್ಲಿಗೆ ಬರಬೇಕೆಂದು ಕೇಳಿ ಲೋಕೇಷನ್ ತರಿಸಿಕೊಂಡಿದ್ದ. ಆತ ಕೊಟ್ಟ ಲೋಕೇಷನ್ ಪಟ್ಟಣಗೆರೆ ಶೆಡ್ಗೆ
ರೇಣುಕಸ್ವಾಮಿಯನ್ನು ಕರೆದುಕೊಂಡು ಹೋಗಿದ್ದರು. ಬೆಳಗಿನ ಜಾವ 2 ಗಂಟೆ ಹೊತ್ತಿಗೆ ರಾಘವೇಂದ್ರ ಹೊರಬಂದು ಕೊಲೆ ಆಗಿರುವ ವಿಷಯ ಕ್ಯಾಬ್ ಚಾಲಕ ರವಿಗೆ ಹೇಳಿದಾಗ ಭಯಗೊಂಡಿದ್ದ. ಶವವನ್ನು ಎಲ್ಲಾದರು ಸಾಗಿಸುವಂತೆ ಹಣದ ಆಮಿಷ ಒಡ್ಡಿದ್ದರು. ಅದಕ್ಕೆ ಒಪ್ಪದ ರವಿ, ಅನುಕುಮಾರ್ ಮತ್ತು ಜಗದೀಶ್ ಬಾಡಿಗೆ 4 ಸಾವಿರ ರೂ. ಪಡೆದು ಅಲ್ಲಿಂದ ಹೊರಟು ಚಿತ್ರದುರ್ಗ ಸೇರಿಕೊಂಡಿದ್ದರು. ಇದಾದ ಮೇಲೆ ಕೇಶವಮೂರ್ತಿ, ನಿಖಿಲ್ ಮತ್ತು ಕಾರ್ತಿಕ್ಗೆ ತಲಾ 5 ಲಕ್ಷ ರೂ. ಕೊಟ್ಟು ಪೊಲೀಸ್ ಠಾಣೆಗೆ ಶರಣಾಗುವಂತೆ ಒಪ್ಪಿಸಿದ್ದರು. ಅಲ್ಲದೆ, ಶವವನ್ನು ಸಾಗಿಸಲು ಬೇರೆ ಆರೋಪಿಗಳಿಗೆ ಹೇಳಿ ಇಡೀ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದರು.
ಏನೆಲ್ಲ ಸಾಕ್ಷ್ಯ ಸಂಗ್ರಹ: ಪಟ್ಟಣಗೆರೆ ಶೆಡ್ನಲ್ಲಿ ರೇಣುಕಸ್ವಾಮಿಯ ರಕ್ತದ ಕಲೆ, ಕೂದಲು, ಬೆವರಿನ ಮಾದರಿ ಹಾಗೂ ಆರೋಪಿಗಳ ಫಿಂಗರ್ ಪ್ರಿಂಟ್, ಫುಟ್ ಪ್ರಿಂಟ್, ಬ್ಲಡ್ ಸ್ಯಾಂಪಲ್, ಸಿಸಿ ಕ್ಯಾಮರಾ ದೃಶ್ಯಾವಳಿ, ಮೊಬೈಲ್ ಕರೆಗಳು ಕಲೆಹಾಕಿದ್ದಾರೆ. ಶವ ಸಾಗಿಸಿದ್ದ ಸ್ಕಾರ್ಪಿಯೋದಲ್ಲಿ ಬೆರಳಚ್ಚು, ರಕ್ತದ ಕಲೆಗಳು, ಮೃತನ ಕೂದಲು, ಬಟ್ಟೆಯ ತುಂಡು ಸಂಗ್ರಹಿಸಿದ್ದಾರೆ .
ನಿರಂತರ ಸಂಭಾಷಣೆ: ರೇಣುಕಸ್ವಾಮಿ ಕಡೆಯಿಂದ ಅಶ್ಲೀಲ ಸಂದೇಶ ಬರುತ್ತಿರುವ ವಿಷಯವನ್ನು ದರ್ಶನ್ ಗಮನಕ್ಕೆ ಪವಿತ್ರಾ ಗೌಡ ತಂದಿದ್ದಳು. ಮನೆ ಕೆಲಸಗಾರ ಪವನ್ನ್ನು ಕರೆದು ದರ್ಶನ್, ಆತನನ್ನ ಕರೆತರುವಂತೆ ಸೂಚಿಸಿದ್ದ. ಪವನ್ ರಾಘವೇಂದ್ರನಿಗೆ ತಿಳಿಸಿ ರೇಣುಕಸ್ವಾಮಿಯನ್ನು ಅಪಹರಣ ಮಾಡಿಸಿದ್ದರು. ಆರೋಪಿಗಳ ಮೊಬೈಲ್ ಕರೆಗಳ ಪರಿಶೀಲನೆ ನಡೆಸಿದಾಗ ದರ್ಶನ್ ಗ್ಯಾಂಗ್ ಜತೆಗೆ ನಿರಂತರವಾಗಿ ಪವಿತ್ರಾ ಗೌಡ ಸಂಭಾಷಣೆ ನಡೆಸಿರುವುದು ದಾಖಲೆ ಸಮೇತ ಸಾಬೀತಾಗಿದೆ.
ಕಿಡ್ನ್ಯಾಪ್ ಅರಿವೇ ಇರಲಿಲ್ಲ!: ರಾಘವೇಂದ್ರ ಮತ್ತು ಗ್ಯಾಂಗ್ ಚಿತ್ರದುರ್ಗದಿಂದ ಕಾರಿನಲ್ಲೇ ರೇಣುಕಸ್ವಾಮಿಯನ್ನು ಕರೆತರುವಾಗ ತಾನು ಅಪಹರಣವಾಗುತ್ತೇನೆ ಎಂಬ ಅರಿವೇ ಇರಲಿಲ್ಲ. ಮಾರ್ಗಮಧ್ಯೆ ಫೋಟೋ ತೆಗೆದು ದರ್ಶನ್ ಗ್ಯಾಂಗ್ಗೆ ಕಳುಹಿಸುತ್ತಿದ್ದನ್ನು ರೇಣುಕಸ್ವಾಮಿ ಪ್ರಶ್ನಿಸಿದಾಗ ಇದು ನನ್ನ ಅಭ್ಯಾಸ ಎಂದು ರಾಘವೇಂದ್ರ ಹೇಳಿದ್ದ. ನಟ ದರ್ಶನ್ ನಿನ್ನ ಕರೆದುಕೊಂಡು ಬರುವಂತೆ ಹೇಳಿದ್ದಾರೆ. ಒಂದು ಸಾರಿ ಅವರ ಬಳಿ ನಾನು ಮಾಡಿದ್ದು, ತಪ್ಪಾಯಿತು ಎಂದು ಕೇಳು ಸಾಕು. ಅವರ ಜತೆ ಸೆಲ್ಪಿ ತೆಗೆಸಿಕೊಂಡು ವಾಪಸ್ ಬರಬಹುದು ಎಂದು ಹೇಳಿಕೊಂಡು ರೇಣುಕಸ್ವಾಮಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾರೆ. ಬೆಂಗಳೂರು ತಲುಪುವಷ್ಟರಲ್ಲಿ ಹಲವು ಬಾರಿ ರವಿ ಕಾರನ್ನು ನಿಲ್ಲಿಸಿದ್ದ. ಎಲ್ಲಿಯೂ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡದೆ ನೇರ ಶೆಡ್ಗೆ ರೇಣುಕಸ್ವಾಮಿ ಹೋಗಿದ್ದ.
ರಾಜಸ್ಥಾನ: ಪೊಲೀಸ್ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ!