

ಕೋಟ: ನಮ್ಮ ಜೀವನ ಪರಿಭಾಷೆಗೆ ಅಳಿವಿಲ್ಲ ಅದು ನಮ್ಮ ಹಿರಿಯರು ನೀಡಿದ ಬಳುವಳಿಯಾಗಿದೆ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ಭಾನುವಾರ ಶ್ರೀ ಕಲ್ಲಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಕೋಟದ ಹರ್ತಟ್ಟು ಗಿಳಿಯಾರು ನಾಗರಿಕರ ಆಶ್ರಯದಲ್ಲಿ ಗಮ್ಮತ್ತಿಗೆ ಆಟ ಗಂಜಿ ಊಟ ಎಂಬ ಗ್ರಾಮೀಣ ಸೊಗಡುಗಳ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಉದ್ಘಾಟಿಸಿದರು. ಮುಖ್ಯ ಅಭ್ಯಾಗತರಾಗಿ ಕಲ್ಲಟ್ಟು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಾಜಿ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್, ಕೋಟ ಪಂಚಾಯಿತಿ ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯ ಅಜಿತ್ ದೇವಾಡಿಗ, ಸಾಮಾಜಿಕ ಕಾರ್ಯಕರ್ತ ಕೆ.ದಿನೇಶ್ ಗಾಣಿಗ, ಸಂಘಟಕರಾದ ತಿಮ್ಮ ಕಾಂಚನ್, ಶೇಖರ್ ದೇವಾಡಿಗ, ಶ್ರೀಧರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಕೋಡಿ ರಾಜೇಶ್ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.
ವಿಶೇಷ ಆಕರ್ಷಣೆಯಾಗಿ ಮೊದಲ ಬಾರಿಗೆ ಗ್ರಾಮೀಣ ಕಂಬಳ, ಪುರುಷರು, ಮಹಿಳೆಯರಿಗೆ ಕೆಸರುಗದ್ದೆ, ವಿವಿಧ ಕ್ರೀಡಾಕೂಟ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ವಿಘ್ನೇಶ ದೇವಾಡಿಗ, ಸಮಾಜಸೇವಕ ಮಂಜುನಾಥ ಪೂಜಾರಿ ಅವರಿಗೆ ಸನ್ಮಾನ ಕಾರ್ಯಕ್ರಮ, 65 ವರ್ಷ ಮೇಲ್ಪಟ್ಟ ಮಹಿಳಾ ಕೃಷಿಕರಿಗೆ ಕ್ರೀಡೆ, ಮಡಕೆ ಸ್ಪರ್ಧೆ, ಹಗ್ಗಜಗ್ಗಾಟ, ಥ್ರೋಬಾಲ್, ತೆಂಗಿನಕಾಯಿ ಎಸೆತ ಹೀಗೆ ಹಲವು ಗ್ರಾಮೀಣ ಕ್ರೀಡೆಗಳು ಜರುಗಿದವು.