

ಅಮರಾವತಿ: ದೇಶದಲ್ಲಿ ಸಾರ್ವತ್ರಿಕ ಚುನಾವಣೆಯ ಭರಾಟೆ ಜೋರಾಗುತ್ತಿದ್ದು, ರಾಜಕೀಯ ಪಕ್ಷಗಳ ನಾಯಕರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಜನತೆ ಬಳಿ ಮತ ಯಾಚಿಸುವಾಗ ಭಿನ್ನ-ವಿಭಿನ್ನ ಘೋಷಣೆಗಳನ್ನು ಮಾಡುತ್ತಾರೆ. ಅದಕ್ಕೆ ಪೂರಕವೆಂಬಂತೆ ಬಿಜೆಪಿಯ ಮಿತ್ರ ಪಕ್ಷ ದೇಶದ ಚುನಾವಣೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಶಿಷ್ಟ ಭರವಸೆ ನೀಡಿದೆ.
ಮುಂದಿನ ಕೆಲವೇ ದಿನಗಳಲ್ಲಿ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಗೆದ್ದು ಅಧಿಕಾರಕ್ಕೆ ಬಂದಲ್ಲಿ ಅಗ್ಗದ ದರದಲ್ಲಿ ಗುಣಮಟ್ಟದ ಮದ್ಯ ಮಾರಾಟ ಮಾಡಲಾಗುವುದು ಎಂದು ತೆಲುಗು ದೇಶಂ ಪಕ್ಷ (TDP) ಮುಖ್ಯಸ್ಥ, ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಘೋಷಿಸಿದ್ಧಾರೆ.
ಆಂಧ್ರಪ್ರದೇಶದಲ್ಲಿ ದಿನದಿಂದ ದಿನಕ್ಕೆ ಮದ್ಯದ ಬೆಲೆ ಹೆಚ್ಚಳವಾಗುತ್ತಿದ್ದು, IMFL ಪೂರೈಕೆಯನ್ನು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ಅವರ ಸಹಚರರು ನಿಯಂತ್ರಿಸುವ ಡಿಸ್ಟಿಲರಿಗಳು ಮತ್ತು ಬ್ರೂವರೀಸ್‌ಗಳಿಂದ ಸರಬರಾಜು ಮಾಡಲಾಗುತ್ತಿದೆ. ವಿಶಿಷ್ಟವಾದ ಹೆಸರುಗಳನ್ನು ಹೊಂದಿರುವ ಎಲ್ಲಾ ಬ್ರಾಂಡ್‌ಗಳು ಅಗ್ಗದ ಮದ್ಯವಲ್ಲದೆ ಬೇರೇನೂ ಅಲ್ಲ . ಬೇರೆ ರಾಜ್ಯಗಳಿಗೆ ಹೋಲಿಸಿದರೆ ಆಂಧ್ರದಲ್ಲಿ ಮದ್ಯದ ಬೆಲೆ ತುಸು ಜಾಸ್ತಿ ಇದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ವೈಎಸ್‌ಆರ್‌ಸಿಪಿ ಸರ್ಕಾರವು ಗುಣಮಟ್ಟಕ್ಕೆ ಹೊಂದಿಕೆಯಾಗದ ಮದ್ಯಕ್ಕೆ ಅತಿಯಾದ ದರವನ್ನು ನಿಗದಿಪಡಿಸಿದೆ. ವರದಿಗಳ ಪ್ರಕಾರ, ರಾಜ್ಯ ಸರ್ಕಾರವು 2019-20 ರಲ್ಲಿ 17,000 ಕೋಟಿ, 2022-23 ರಲ್ಲಿ ಸುಮಾರು 24,000 ಕೋಟಿ ರೂಪಾಯಿಗಳನ್ನು ಅಬಕಾರಿ ಇಲಾಖೆ ಮೂಲಕ ಆದಾಯ ಗಳಿಸಿದೆ.
2019 ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಮದ್ಯಪಾನ ನಿಷೇಧ ಮಾಡುವುದಾಗಿ ಭರವಸೆ ನೀಡಿದ್ದ ಜಗನ್ ಈಗ ತಾವು ಕೊಟ್ಟ ಮಾತಿನಿಂದ ಹಿಂದೆ ಸರಿಯುತ್ತಿದ್ದಾರೆ. ಮದ್ಯದ ದರ ಸೇರಿದಂತೆ ದಿನಬಳಿಕೆಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜಗನ್ ನೇತೃತ್ವದ ವೈಎಸ್‌ಆರ್‌ಸಿಪಿ ಪಕ್ಷವು ಅಗ್ಗದ ಗುಣಮಟ್ಟದ ಮದ್ಯವನ್ನು ಸರಬರಾಹು ಮಾಡುವ ಮೂಲಕ ಜನರ ಆರೋಗ್ಯವನ್ನು ಹಾಳು ಮಾಡುತ್ತಿದ್ದಾರೆ. ಬೆಲೆ ಏರಿಕೆ ಹಾಗೂ ಮದ್ಯದ ದರವನ್ನು ಕಡಿಮೆ ಮಾಡಿಸುವ ನಿಟ್ಟಿನಲ್ಲಿ ನೀವು ನಮಗೆ ಮತ ಹಾಕಬೇಕು ಎಂದು ತೆಲುಗು ದೇಶಂ ಪಕ್ಷ (TDP) ಮುಖ್ಯಸ್ಥ, ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.