

ಅಮರಾವತಿ: ಕೌಶಲ್ಯಾಭಿವೃದ್ದಿ ನಿಗಮದಲ್ಲಿನ ಬಹುಕೋಟಿ ಅಕ್ರಮ ವ್ಯವಹಾರದಲ್ಲಿ ಜೈಲು ಸೇರಿದ್ದ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡುಗೆ ಆಂಧ್ರಪ್ರದೇಶ ಹೈಕೋರ್ಟ್ ನಾಲ್ಕು ವಾರಗಳ ಮಧ್ಯಂತರ ಜಾಮೀನು ನೀಡಿದೆ.
ಆರೋಗ್ಯ ಸಮಸ್ಯೆ ಹಿನ್ನಲೆಯಲ್ಲಿ ಚಂದ್ರಬಾಬು ನಾಯ್ಡು ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಅಕ್ಟೋಬರ್ 18ರಂದು ನಾಯ್ಡು ಅವರನ್ನು ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿ ಕುಟುಂಬಸ್ಥರು ಭೇಟಿ ಮಾಡಿದ ಬಳಿಕ ಅವರ ಆರೋಗ್ಯದ ಕುರಿತು ಕಳವಳ ವ್ಯಕ್ತವಾಗಿತ್ತು.
ಆಂಧ್ರಪ್ರದೇಶ ಕೌಶಲ್ಯಭಿವೃದ್ದಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಸಿಐಡಿ ಅಧಿಕಾರಿಗಳು ಚಂದ್ರಬಾಬು ನಾಯ್ಡು ಅವರನ್ನು ಆಂಧ್ರಪ್ರದೇಶದ ನಂದ್ಯಾಲದಲ್ಲಿ ಬಂಧಿಸಿದ್ದರು.