ನವದೆಹಲಿ: ಈ ಹಿಂದೆ ದೆಹಲಿ ಸರ್ಕಾರ ಜಾರಿಗೆ ತಂದಿದ್ದ ಅಬಕಾರಿ ನೀತಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ನವೆಂಬರ್ 2ರಂದು ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ.
ಅಬಕಾರಿ ನೀತಿ ಜಾರಿಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಬಹುಕೋಟಿ ಹಣ ವರ್ಗಾವಣೆಗೆ ಸಂಬಂಧಿಸಿದಂತೆ 7 ತಿಂಗಳ ಹಿಂದೆ ಅರವಿಂದ್ ಕೇಜ್ರಿವಾಲ್ರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿತ್ತು.
ಇದನ್ನೂ ಓದಿ: ತೆಲಂಗಾಣ ಚುನಾವಣೆ; ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ತನಿಖಾಧಿಕಾರಿಗಳ ಮುಂದೆ ತಮ್ಮ ಹೇಳಿಕೆ ದಾಖಲಿಸಲು ಕೇಜ್ರಿವಾಲ್ಗೆ ಸಮನ್ಸ್ ನೀಡಲಾಗಿದೆ. ಅಬಕಾರಿ ನೀತಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇದೇ ಮೊದಲ ಬಾರಿಗೆ ನೋಟಿಸ್ ಜಾರಿ ಮಾಡಿದೆ.
ಇತ್ತ ಕೇಜ್ರಿವಾಲ್ಗೆ ಸಮನ್ಸ್ ನೀಡಿರುವ ತನಿಖಾ ಸಂಸ್ಥೆಯ ಕ್ರಮವನ್ನು ಖಂಡಿಸಿರುವ ಸಚಿವ ಸೌರಭ್ ಭಾರಧ್ವಾಜ್, ಇದು ಕೇಂದ್ರ ಎಎಪಿ ಸರ್ಕಾರದ ವಿರುದ್ಧ ಹೆಣೆದಿರುವ ಷಡ್ಯಂತ್ರ. ವಿಚಾರಣೆಯ ಹೆಸರಿನಲ್ಲಿ ಮುಖ್ಯಮಂತ್ರಿಗಳನ್ನು ಬಂಧಿಸಿ ಸರ್ಕಾರವನ್ನು ಪತನ ಮಾಡಬೇಕೆಂದು ಬಿಜೆಪಿ ಷಡ್ಯಂತ್ರ ಹೆಣೆದಿದೆ. ನಾವು ಯಾರು ಇದಕ್ಕೆ ಹೆದರುವವರಲ್ಲ ಎಂದು ಕಿಡಿಕಾರಿದ್ದಾರೆ.