ರಾಮೋಜಿ ಸ್ಫೂರ್ತಿಯಲ್ಲಿ ಆಂಧ್ರ ಅಭಿವೃದ್ಧಿ: ಚಂದ್ರಬಾಬು

babu
Published on

ಹೈದರಾಬಾದ್: ರಾಮೋಜಿ ರಾವ್ ತೆಲುಗು ನೆಲಕ್ಕೆ ದೊಡ್ಡ ಸ್ಫೂರ್ತಿ ನೀಡಿದ ವ್ಯಕ್ತಿ ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಕೊಂಡಾಡಿದರು.

ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

“ರಾಮೋಜಿ ರಾವ್ ಅವರ ಸಾವು ಅತ್ಯಂತ ದುಃಖಕರವಾಗಿದೆ.ಯುಗಪುರುಷನ ಸಾವನ್ನು ನಾವು ಅರಗಿಸಿಕೊಳ್ಳಲಾಗುತ್ತಿಲ್ಲ. ಅನುನಿತ್ಯ ಸಮಾಜದ ಶ್ರೇಯೋಭಿವೃದ್ಧಿಗಾಗಿ ತೆಲುಗು ನಾಡಿಗಾಗಿ ದುಡಿದರು ಎಂದರು.

ಸಾಮಾನ್ಯ ಕುಟುಂಬದಲ್ಲಿ ಹಳ್ಳಿಯಲ್ಲಿ ಹುಟ್ಟಿ ಅಸಾಮಾನ್ಯರಾಗಿ ಬೆಳೆದವರು ರಾಮೋಜಿ. ಅವರು ಒಬ್ಬ ವ್ಯಕ್ತಿಯಾಗಿರದೆ ಶಕ್ತಿಯಾಗಿದ್ದರು. ಮಾರ್ಗದರ್ಶಿ ಚಿಟ್​ಫಂಡ್ಸ್​ ಪ್ರಾರಂಭಿಸಿ, ನಂತರ ಈನಾಡು ಮತ್ತು ಈಟಿವಿಯಂತಹ ಪ್ರತಿಷ್ಠಿತ ಸಂಸ್ಥೆಗಳನ್ನು ಸ್ಥಾಪಿಸಿದರು. 40 ವರ್ಷಗಳಿಂದ ನಾನು ಅವರ ಸಂಪರ್ಕದಲ್ಲಿದ್ದೇನೆ, ಅವರು ಯಾವಾಗಲೂ ಜನರ ಪರವಾಗಿದ್ದರು. ಸಾಯುವವರೆಗೂ ಕರ್ತವ್ಯಕ್ಕೆ ಬೆಲೆ ಕೊಡುತ್ತಿದ್ದರು ಎಂದು ಹೇಳಿದರು .

ಅವರು ಕಟ್ಟಿದ ವ್ಯವಸ್ಥೆಗಳು ದೃಢವಾಗಿವೆ. ಚಿತ್ರರಂಗಕ್ಕೆ ಲೆಕ್ಕವಿಲ್ಲದಷ್ಟು ಸೇವೆ ಸಲ್ಲಿಸಿದ್ದಾರೆ. ರಾಮೋಜಿ ಫಿಲಂ ಸಿಟಿಯನ್ನು ದೇಶದಲ್ಲೇ ಅತ್ಯುನ್ನತ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ. ನನ್ನಿಂದಾಗಿ ಈ ನಗರ, ರಾಜ್ಯಕ್ಕೆ ಆದಾಯ ಬರಬೇಕು ಎಂದು ಹೇಳುತ್ತಿದ್ದರು. ತೆಲುಗು ನಾಡಿನ ಬೆಳಕು ಅವರು. ಅಂತಹ ವ್ಯಕ್ತಿಯನ್ನು ಕಳೆದುಕೊಂಡಿರುವುದು ತುಂಬಾ ನೋವಿನ ಸಂಗತಿ. ರಾಮೋಜಿ ರಾವ್ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿ. ನನಗೆ ಕಷ್ಟಕರವಾದ ಸಮಸ್ಯೆಗಳು ಬಂದಾಗ ಅವರು ತುಂಬಾ ಪ್ರೋತ್ಸಾಹಿಸಿದ್ದರು. ಚುನಾವಣೆ ಬಂದಾಗಲೆಲ್ಲ ಸದಾಚಾರದ ಪರವಾಗಿಯೇ ಇದ್ದು ಕೆಲಸ ಮಾಡುತ್ತಿದ್ದರು. ಜನರಿಗೂ ಅವರ ಮೇಲೆ ಅಚಲವಾದ ನಂಬಿಕೆ. ಅದಕ್ಕೆ ಕಾರಣ ಅವರು ತಮ್ಮ ಜೀವನದುದ್ದಕ್ಕೂ ಗಳಿಸಿದ್ಧು ವಿಶ್ವಾಸಾರ್ಹತೆ. ಅಂತಹ ವ್ಯಕ್ತಿಯನ್ನು ಕಳೆದುಕೊಂಡರೆ ನೋವಾಗುತ್ತದೆ. ರಾಮೋಜಿ ರಾವ್ ಅವರನ್ನು ಎಲ್ಲರೂ ಆರಾಧಿಸುತ್ತಾರೆ. ಅವರ ಮಾತು ನನ್ನ ಕಿವಿಯಲ್ಲಿ ಸದಾ ಗುಂಯ್ಗುಡುತ್ತಿರುತ್ತದೆ. ರಾಮೋಜಿ ರಾವ್ ನೀಡಿದ ಪ್ರೇರಣೆಯಿಂದ ಆಂಧ್ರಪ್ರದೇಶವನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಚಂದ್ರಬಾಬು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net