ಅರ್ಧಕ್ಕೆ ಹನಿಮೂನ್​ ಮೊಟಕುಗೊಳಿಸಿ ತವರಿಗೆ ಮರಳಿರುವ ಚಂದನ್​-ನಿವೇದಿತಾರಿಂದ ವದಂತಿಗೆ ತೆರೆ!​

Chandan Shetty
Published on

ಮಂಡ್ಯ: ಅದ್ಧೂರಿ ಮದುವೆಯಾದ ಬಳಿಕ ಬಿಗ್​ಬಾಸ್​ ಜೋಡಿ ಚಂದನ್​ ಶೆಟ್ಟಿ-ನಿವೇದಿತಾ ಗೌಡ ಹನಿಮೂನ್​ಗಾಗಿ ವಿದೇಶಕ್ಕೆ ಹಾರಿದ್ದರು. ಆದರೆ, ವಿಶ್ವದೆಲ್ಲೆಡೆ ಹರಡಿರುವ ಕರೊನಾ ಭೀತಿಯಿಂದಾಗಿ ಹನಿಮೂನ್​ ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ಮರಳಿದ್ದಾರೆ. ಇದರ ನಡುವೆ ತಮ್ಮ ಬಗ್ಗೆ ಹರಡಿರುವ ವದಂತಿಗಳಿಗೆ ತಾರಾ ದಂಪತಿ ಸ್ಪಷ್ಟನೆ ನೀಡಿದ್ದಾರೆ.

ಮಂಡ್ಯದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಚಂದನ್​ ಶೆಟ್ಟಿ ಹಾಗೂ ನಿವೇದಿತಾ, ನಾವು ಹೋಗಿದ್ದು ನೆದರ್ಲ್ಯಾಂಡ್‌ಗೆ ಹೊರತು ಇಟಲಿಗೆ ಹೋಗಿಲ್ಲ. ಈ ಬಗ್ಗೆ ಸುಳ್ಳು ಸುದ್ದಿ ಹರಡಿಸಿದ್ದಾರೆ. ನಾವು ಇಟಲಿಗೆ ಹೋಗಿದ್ದೆವು ಎಂಬುದಕ್ಕೆ ಸಾಕ್ಷಿ ಇಲ್ಲದಿದ್ದರು, ಸುಮ್ಮನ್ನೇ ವದಂತಿ ಹರಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾವು ಎಲ್ಲಿಗೆ ಹೋಗಿದ್ದೆವು ಎಂಬ ಮಾಹಿತಿ ಅಧಿಕಾರಿಗಳಿಗೆ ಇರಲಿದೆ. ನಾವು ಮಾರ್ಚ್ 3 ರಂದು ನೆದರ್ಲೆಂಡ್‌ಗೆ ಹೋಗಿದ್ದೆವು. ಆ ವೇಳೆ ಅಲ್ಲಿ ಕರೊನಾ ಭೀತಿ ಇರಲಿಲ್ಲ. ಭೀತಿ ಬಂದ ನಂತರ ನಾವು ವಾಪಸ್ಸು ಬಂದಿದ್ದೇವೆ. ಸದ್ಯ ನಾವು ಆರೋಗ್ಯವಾಗಿಯೇ ಇದೀವಿ. ರಕ್ತ ಪರೀಕ್ಷೆ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ತಪಾಸಣೆ ಮಾಡಿಸಿದ್ದು ಆರೋಗ್ಯದಿಂದ ಇದ್ದೇವೆ. ಇಲ್ಲೂ ಸಹ ಯಾವುದೇ ರೀತಿಯ ಆರೋಗ್ಯ ತಪಾಸಣೆಗೆ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಕರೊನಾ ಭೀತಿ ಕಳೆದ ಮೇಲೆ ನಾವು ಮತ್ತೇ ಹೋಗುತ್ತೇವೆ. ಹನಿಮೂನ್ ಅರ್ಧಕ್ಕೆ ನಿಂತಿದ್ದಕ್ಕೆ ಬೇಸರ ಇದೆ. ಬೇಸರಕ್ಕಿಂತಲೂ ಹೆಚ್ಚಾಗಿ ಆರೋಗ್ಯ ಮುಖ್ಯ. ಎಲ್ಲಾ ಸರಿ ಹೋದ ಮೇಲೆ ನಾವು ಮತ್ತೆ ಹೋಗುತ್ತೇವೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net