

ನವದೆಹಲಿ: 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ (Champions Trophy) ಸಂಬಂಧಿಸಿದಂತೆ ಭುಗಿಲೆದ್ದಿದ ವಿವಾದ ಶಾಂತಗೊಂಡಿದ್ದು, ಭಾರತ ತಂಡವು ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಡಲಿದೆ. ಇನ್ನೂ ಟೂರ್ನಿಗೆ ಸಂಬಂಧಿಸಿದಂತೆ ಅಪ್ಡೇಟ್ ಒಂದು ಹೊರಬಿದ್ದಿದ್ದು, ಕರಡು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
2025ರ ಫೆಬ್ರವರಿ 19ರಂದು ಟೂರ್ನಿ ಆರಂಭವಾಗಲಿದ್ದು, ಮಾರ್ಚ್ 09ರಂದು ಮುಕ್ತಾಯಗೊಳ್ಳಲಿದೆ. ಸದ್ಯ ಬಿಡುಗಡೆಯಾಗಿರುವ ಕರಡು ವೇಳಾಪಟ್ಟಿಯಲ್ಲಿ ಗ್ರೂಪ್ ಎನಲ್ಲಿ ಟೀಮ್ ಇಂಡಿಯಾ ಕಾಣಿಸಿಕೊಂಡಿದದ್ದು, ಫೆಬ್ರವರಿ 20ರಿಂದ ತನ್ನ ಅಭಿಯಾನವನ್ನು ಆರಂಭಿಸಲಿದ್ದು, ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ.
ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿರುವ ಭಾರತ ತಂಡವು ಮೂರನೇ ಪಂದ್ಯ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಾಡಲಿದೆ. ಟೂರ್ನಿಯಲ್ಲಿ ಒಟ್ಟು ಎಂದು ತಂಡಗಳು ಭಾಗಿಯಾಗಲಿದ್ದು, ಭಾರತದ ಪಂದ್ಯಗಳು ದುಬೈನಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದ್ದು ಇನ್ನಷ್ಟೇ ಖಚಿತವಾಗಬೇಕಿದೆ.
ಭಾರತದ ಎಲ್ಲಾ ಪಂದ್ಯಗಳು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು, ಒಂದು ವೇಳೆ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಿದರೆ ಆ ಪಂದ್ಯ ಕೂಡ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಸದ್ಯ ಕರಡು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ಅಂತಿಮ ವೇಳಾಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಫೆಬ್ರವರಿ 20 ಭಾರತ vs ಬಾಂಗ್ಲಾದೇಶ
ಫೆಬ್ರವರಿ 23 ಭಾರತ vs ನ್ಯೂಜಿಲೆಂಡ್
ಮಾರ್ಚ್ 01 ಭಾರತ vs ಪಾಕಿಸ್ತಾನ