ಚಾಮರಾಜಪೇಟೆ ಬಡಾವಣೆಗೆ ಸಿಸಿಟಿವಿ ಅಳವಡಿಸಲು ಶೀಘ್ರದಲ್ಲೇ ಅನುದಾನ: ಸಂಸದ ಪಿ.ಸಿ. ಮೋಹನ್

CRWA
ಸಂಸದ ಪಿ.ಸಿ.ಮೋಹನ್​​ ಅವರಿಂದ ಚಾಮರಾಜಪೇಟೆ ರೆಸಿಡೆಂಟ್ಸ್​ ವೆಲ್​ಫೇರ್ ಅಸೋಸಿಯೇಷನ್​ ಉದ್ಘಾಟನೆ. ಸಂಘದ ಗೌರವಾಧ್ಯಕ್ಷ ಡಾ.ಎ. ಪ್ರಕಾಶ್, ಅಧ್ಯಕ್ಷ ಬಿ.ಎಸ್​.ಸುಬ್ಬಣ್ಣ, ಉಪಾಧ್ಯಕ್ಷರಾದ ಡಾ.ಎನ್.ಎಸ್. ಕೃಷ್ಣಮೂರ್ತಿ, ಎ.ಪಿ. ಗಂಗಾಧರ್ ಮತ್ತಿತರರು ಇದ್ದರು.
Published on

ಬೆಂಗಳೂರು: ಚಾಮರಾಜಪೇಟೆ ನಿವಾಸಿಗರ ಸಮಸ್ಯೆ ಆಲಿಸಲು ತಿಂಗಳಿಗೊಮ್ಮೆ ಶಾಸಕರ ಜೊತೆ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಪಿ.ಸಿ. ಮೋಹನ್ ಭರವಸೆ ನೀಡಿದರು.

ಬೆಂಗಳೂರಿನ ಚಾಮರಾಜಪೇಟೆಯ ಮಕ್ಕಳ ಕೂಟದಲ್ಲಿ ಇಂದು ನಡೆದ ಚಾಮರಾಜಪೇಟೆ ರೆಸಿಡೆಂಟ್ಸ್ ವೆಲ್​ಫೇರ್​ ಅಸೋಸಿಯೇಷನ್ (ರಿ.) ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಚಾಮರಾಜಪೇಟೆ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘದವರು ತಿಂಗಳಿಗೊಮ್ಮೆ ಸಭೆ ಕರೆಯುವುದಾಗಿ ಹೇಳಿದ್ದಾರೆ. ಅವರ ಸಭೆಯಲ್ಲಿ ಪ್ರತಿ ತಿಂಗಳೂ ಶಾಸಕರ ಜೊತೆಯಾಗಿ ನಾನು ಹಾಜರಿದ್ದು, ಬಡಾವಣೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಸಂಸದ ಪಿ.ಸಿ. ಮೋಹನ್ ಭರವಸೆ ನೀಡಿದರು.

ಸಂಸದನಾಗಿ ನಾನು ಹಾಗೂ ಶಾಸಕರಾಗಿ ಜಮೀರ್ ಅಹಮದ್ ಖಾನ್ ಬೇರೆ ಬೇರೆ ಪಕ್ಷದವರಾದರೂ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಮ್ಮಲ್ಲಿ ಪಕ್ಷಭೇದವಿಲ್ಲ. ಐದು ವರ್ಷದ ಅವಧಿಯಲ್ಲಿ ಒಂದು ಹದಿನೈದು ದಿನ ಮಾತ್ರ ಅವರು ಅವರ ಪರವಾಗಿ ಹಾಗೂ ನಾನು ನನ್ನ ಪರವಾಗಿ ಮತ ಯಾಚಿಸುತ್ತೇವೆ. ಉಳಿದಂತೆ ನಮ್ಮದು ಪಕ್ಷಾತೀತ ಕೆಲಸ ಎಂದು ಸಂಸದರು ತಿಳಿಸಿದರು.

ಸಂಘದವರು ಬಡಾವಣೆಗೆ ಸಿಸಿಟಿವಿ ಅಳವಡಿಕೆಗೆ ಅನುದಾನ ನೀಡುವಂತೆ ಕೋರಿದ್ದು, ಅದಕ್ಕೆ ಸಂಸದರ ನಿಧಿಯಿಂದ ಹಣ ಒದಗಿಸುವ ಭರವಸೆ ನೀಡಿದರು. ಇನ್ನು ಚಾಮರಾಜಪೇಟೆಯ ಫುಟ್ಪಾತ್ ವ್ಯಾಪಾರಿಗಳಿಗೆ ಸೂಕ್ತ ಜಾಗ ಕೊಡುವ ಬಗ್ಗೆ ನೀವೇ ನಿರ್ಧರಿಸಿ ಸಲಹೆ ಕೊಟ್ಟರೆ ಆ ಕುರಿತು ಕ್ರಮ ಜರುಗಿಸಲಾಗುವುದು ಎಂದರು.

ಸಂಘದ ಲಾಂಛನವನ್ನಾಗಿ ಚಾಮರಾಜ ಒಡೆಯರ್ ಅವರ ಚಿತ್ರವನ್ನು ಆರಿಸಿಕೊಂಡಿರುವುದು ಸ್ವಾಗತಾರ್ಹ. ಇದು ಅವರದೇ ಹೆಸರಿನಲ್ಲಿರುವ ಬಡಾವಣೆಯಾದರೂ ಎಲ್ಲೂ ಅವರ ಪುತ್ಥಳಿ ಇಲ್ಲ. ಕೋಟೆ ಪ್ರೌಢಶಾಲೆಯ ಒಂದು ಬದಿಯ ಜಾಗದಲ್ಲಿ ಚಾಮರಾಜ ಒಡೆಯರ್ ಅವರ ಪುತ್ಥಳಿ ನಿರ್ಮಿಸಿ, ಈಗಿನ ಯುವರಾಜರಿಂದ ಅದನ್ನು ಉದ್ಘಾಟಿಸುವ ಆಶಯ ವ್ಯಕ್ತಪಡಿಸಿದ ಅವರು, ಆ ಕುರಿತು ಪಾಲಿಕೆ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

ಸಂಘದ ಅಧ್ಯಕ್ಷ ಬಿ.ಎಸ್. ಸುಬ್ಬಣ್ಣ ಮಾತನಾಡಿ, ಸಂಘ ಆರಂಭವಾದ ಬಗೆ, ಅದಕ್ಕೆ ಜೊತೆಯಾದವರ ಬಗ್ಗೆ ವಿವರಿಸಿದರು. ಇದು ಹತ್ತನೇ ಚಾಮರಾಜ ಒಡೆಯರ್ ಅವರು ನಿರ್ಮಿಸಿದ್ದ ಬಡಾವಣೆ ಆಗಿರುವುದರಿಂದ ಒಡೆಯರ್ ಅವರ ಹೆಸರು ಹಾಗೂ ಚಿತ್ರವನ್ನೇ ಲಾಂಛನವಾಗಿ ಬಳಸಿಕೊಳ್ಳಲಾಗಿದೆ. ಚಾಮರಾಜಪೇಟೆ 1ನೇ ಮುಖ್ಯರಸ್ತೆಯಿಂದ 9ನೇ ಮುಖ್ಯರಸ್ತೆ ವರೆಗೆ ಸಂಘದ ವ್ಯಾಪ್ತಿ ಇದ್ದು, ಈ ವ್ಯಾಪ್ತಿಯಲ್ಲಿನ ಸ್ವಂತ ಮನೆ ಹೊಂದಿರುವ ಯಾರು ಬೇಕಾದರೂ ಸಂಘದ ಸದಸ್ಯರಾಗಬಹುದು. ಸದ್ಯ ಸಂಘದಲ್ಲಿ 125 ಸದಸ್ಯರಿದ್ದು, ನಿವಾಸಿಗರು ಬಡಾವಣೆಗೆ ಸಂಬಂಧಿಸಿದ ತಮ್ಮ ಕುಂದುಕೊರತೆಗಳನ್ನು ನಮ್ಮ ಗಮನಕ್ಕೆ ತಂದಲ್ಲಿ ಅದನ್ನು ಬಗೆಹರಿಸಲಾಗುವುದು ಎಂದರು. ದೊಡ್ಡ ಸಮಸ್ಯೆಗಳಿಗೆ ಸಂಸದರು-ಶಾಸಕರ ನೆರವು ಪಡೆದು ಬಗೆಹರಿಸಲಾಗುವುದು ಎಂದ ಅವರು, ಬಡಾವಣೆಯಲ್ಲಿ ಆದಷ್ಟೂ ಒಗ್ಗಟ್ಟಿನಿಂದ ಇರೋಣ ಎಂದು ಆಶಯ ವ್ಯಕ್ತಪಡಿಸಿದರು. ಆರೋಗ್ಯ ಶಿಬಿರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ಹಾಗೂ ಪುರಸ್ಕಾರ ಸೇರಿದಂತೆ ಹಲವು ಉದ್ದೇಶಗಳನ್ನು ಸಂಘ ಇರಿಸಿಕೊಂಡಿದೆ ಎಂದರು.

ಮೈಸೂರಿನ ಕಥೆಗಳು ಖ್ಯಾತಿಯ ಧರ್ಮೇಂದ್ರ ಕುಮಾರ್ ಅರೇಹಳ್ಳಿ ಮಾತನಾಡಿ, ಚಾಮರಾಜಪೇಟೆಯ ಐತಿಹಾಸಿಕ ಸಂಗತಿಗಳನ್ನು ತಿಳಿಸಿದರು. ಚಾಮರಾಜಪೇಟೆಯ ಮಾಜಿ ಪಾಲಿಕೆ ಸದಸ್ಯ ಚಂದ್ರಶೇಖರ್ ತಮ್ಮ ಸಕಲ ಸಹಕಾರ ಇರುವುದಾಗಿ ತಿಳಿಸಿದರು. ಸಂಘದ ಗೌರವಾಧ್ಯಕ್ಷ ಡಾ.ಎ. ಪ್ರಕಾಶ್, ಉಪಾಧ್ಯಕ್ಷರಾದ ಡಾ.ಎನ್.ಎಸ್. ಕೃಷ್ಣಮೂರ್ತಿ, ಎ.ಪಿ. ಗಂಗಾಧರ್, ಕಾನೂನು ಸಲಹೆಗಾರ ಬಿ.ಎಸ್.ರಾಧಾನಂದನ್ ಹಾಗೂ ಸಂಘದ ಪದಾಧಿಕಾರಿಗಳು, ಬಡಾವಣೆಯ ನಿವಾಸಿಗರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net