'ನಿಮ್ಮ ಪ್ರೀತಿ-ಅಭಿಮಾನಕ್ಕೆ ಎಂದಿಗೂ ಬೆಲೆ ಕಟ್ಟಲಾಗುವುದಿಲ್ಲ': ದರ್ಶನ್

d boss
Published on

ಬೆಂಗಳೂರು: ಅಭಿಮಾನಿಗಳ ಆರಾಧ್ಯ ದೈವ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಸೂಪರ್​ ಹಿಟ್​ ಸಿನಿಮಾಗಳ ಮೂಲಕ ಅಪಾರ ಅಭಿಮಾನಿಗಳ ಬಳಗವನ್ನು ಸಂಪಾದಿಸಿದ್ದಾರೆ. ಹಾಗೂ ತಮ್ಮ ಸಮಾಜಮುಖಿ ಕೆಲಸಗಳಿಂದಲೂ ದರ್ಶನ್​ ತಮ್ಮ ಸೆಲೆಬ್ರೆಟಿಗಳಿಗೆ ಹೆಚ್ಚು ಹತ್ತಿರವಾಗಿದ್ದಾರೆ. ದರ್ಶನ್​ ಕೊಡುವ ಹೇಳಿಕೆಗಳು ಸೋಶಿಯಲ್​ ಮೀಡಿಯಾದಲ್ಲಿ ಸದ್ದುಮಾಡುತ್ತಿದೆ. ಅಭಿಮಾನಿಗಳಿಗೆ ಸ್ಫೂರ್ತಿ ತುಂಬುತ್ತದೆ.

ಇತ್ತೀಚೆಗೆ ದರ್ಶನ್‌ ಅವರ ಫ್ಯಾನ್ಸ್‌ಗೆ ಸಂಭ್ರಮಿಸಲು ಹಲವು ಕಾರಣಗಳು ಸಿಕ್ಕಿದ್ದವು. ಅವರ ಹುಟ್ಟುಹಬ್ಬದ ದಿನದಂದು ಅಪಾರ ಅಭಿಮಾನಿಗಳು ದರ್ಶನ್‌ ಅವರ ಮನೆ ಮುಂದೆ ಆಗಮಿಸಿದ್ದರು. ಅಭಿಮಾನಿಗಳನ್ನು ನಿಯಂತ್ರಿಸಲು ನೂರಾರು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಕ್ಕಪಕ್ಕದ ಮನೆಯವರಿಗೆ ತೊಂದರೆಯಾಗದಂತೆ ಪೊಲೀಸ್​ ಸಿಬ್ಬಂದಿ ಶ್ರಮಿಸಿದ್ದರು.

ದರ್ಶನ್ ಅಭಿನಯಿಸಿರುವ ಎಲ್ಲ ಸಿನಿಮಾಗಳ ಹೆಸರನ್ನು ಸ್ಕೂಟಿ ಮೇಲೆ ವಿಶೇಷ ಚೇತನ ಅಭಿಮಾನಿಯೊಬ್ಬರು ಹಾಕಿಸಿದ್ದರು. ಬ್ಯಾರಿಕೇಡ್‌ಗಳನ್ನು ಹಾಕಿ, ಸರದಿ ಸಾಲಿನಲ್ಲಿ ನಿಂತು ನೆಚ್ಚಿನ ನಟನಿಗೆ ಶುಭ ಕೋರಿದ್ದರು. ಇದೀಗ ದರ್ಶನ್‌ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಧನ್ಯವಾದ ತಿಳಿಸಿದ್ದಾರೆ.

''ನನ್ನ ಪ್ರೀತಿಯ ಕೋರಿಕೆಗೆ ಬೆಲೆಕೊಟ್ಟು ಶಾಂತ ರೀತಿಯಲ್ಲಿ ಹುಟ್ಟುಹಬ್ಬದ ಆಚರಣೆಗೆ ಸಹಕರಿಸಿದ ಅಭಿಮಾನಿ ವರ್ಗಕ್ಕೆ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ನನ್ನ ಹೃದಯಪೂರ್ವಕ ವಂದನೆಗಳು. ನನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳು ತಿಳಿಸಿದ ಪ್ರಿಯ ಬಂಧು-ಮಿತ್ರರು, ಚಿತ್ರರಂಗದ ಸ್ನೇಹಿತರು, ಎಲ್ಲಾ ಮೀಡಿಯಾ ಮಿತ್ರರು, ರಾಜಕೀಯ ಗಣ್ಯರು, ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಅನಂತ ಅನಂತ ವಂದನೆಗಳು. ಹುಟ್ಟುಹಬ್ಬದ ಪ್ರಯುಕ್ತ ಅನೇಕ ಅನಾಥಾಶ್ರಮ ಹಾಗೂ ವೃದ್ದಾಶ್ರಮಗಳಲ್ಲಿ ತಮ್ಮ ಕೈಲಾದ ಸೇವೆ ಮಾಡಿದ ಅಭಿಮಾನಿಗಳಿಗೆ ನನ್ನ ಅಭಿನಂದನೆಗಳು.

ಈ ನಿಮ್ಮ ಪ್ರೀತಿ-ಅಭಿಮಾನಕ್ಕೆ ಎಂದಿಗೂ ಬೆಲೆ ಕಟ್ಟಲಾಗುವುದಿಲ್ಲ. ಧನ್ಯೋಸ್ಮಿ ಕರ್ನಾಟಕ ನಮಸ್ಕಾರ ಎಂದು ಟ್ಟೀಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net