

ಬೆಂಗಳೂರು : ಕೋವಿಡ್ ಸೋಂಕಿತರ ಸೇವೆಯಲ್ಲಿ ಹಗಲಿರುಳೆನ್ನದೇ ತೊಡಗಿಸಿಕೊಂಡಿರುವ ಕೋವಿಡ್ ವಾರಿಯರ್ಗಳ ವಿಶ್ವಾಸ ಹೆಚ್ಚಿಸುವ ಆಶಯದಿಂದ ಅವರ ಸೇವೆಗೆ ಮೀಸಲಾದ 'ಚೈತನ್ಯ ಕೇಂದ್ರ'ವನ್ನು ಬೆಂಗಳೂರಿನ ರಾಜಾಜಿನಗರದಲ್ಲಿ ಇಂದಿನಿಂದ ಆರಂಭಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಚೈತನ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಈ ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ, ದಾದಿಯರಿಗೆ, ವೈದ್ಯರಿಗೆ ಹಾಗೂ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರಿಗೆ ಸ್ವನಿಯಂತ್ರಿತ ಹವಾ (Steam) ಸೌಲಭ್ಯ, ಕಷಾಯ ಸೇವನೆ, ಹಾಗೂ ಕುಡಿಯಲು ಬಿಸಿ ನೀರನ್ನು ನಿರಂತರವಾಗಿ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಅವರ ಸೇವೆಯನ್ನು ಗೌರವಿಸುವ ಒಂದು ಪ್ರಯತ್ನ ಇದಾಗಿದ್ದು, ಇದರಿಂದ ಸಮಾಜದಲ್ಲಿ ವಿಶ್ವಾಸ ವೃದ್ಧಿಸುವ ಕಾರ್ಯವಾದರೆ ತಮ್ಮ ಶ್ರಮ ಸಾರ್ಥಕ ಎಂದಿದ್ದಾರೆ.
ಮನೆಮನೆಗೆ ಆಮ್ಲಜನಕ: ಆ್ಯಂಬ್ಯುಲೆನ್ಸ್ ಸೇವೆಯ ಜೊತೆಗೆ ಸುಮಾರು 20 ಆಮ್ಲಜನಕ ಸಿಲಿಂಡರ್ಗಳ ಮೂಲಕ ಅಗತ್ಯವಿರುವ ವ್ಯಕ್ತಿಗಳಿಗೆ ಮನೆಗೇ ಆಮ್ಲಜನಕ ಪೂರೈಸುವ ಕಾರ್ಯ ಕೂಡ ಇಂದು ಪ್ರಾರಂಭವಾಗಿದೆ. ಬಾಷ್ಯಂ ವೃತ್ತದ ಬಳಿಯಿರುವ ಡಾಕ್ಟರ್ ನಾಗರಾಜ ಆಸ್ಪತ್ರೆಯಲ್ಲಿ 20 ಆಮ್ಲಜನಕ ಪೂರೈಕೆಯುಳ್ಳ ಬೆಡ್ಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಈ ಕೇಂದ್ರದ ಕಾರ್ಯಾರಂಭವಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ಉಚಿತ ಆಂಬ್ಯುಲೆನ್ಸ್: ಇದೇ ಸಂದರ್ಭದಲ್ಲಿ ರಾಜಾಜಿನಗರ ಬಿಜೆಪಿ ಘಟಕದ ವತಿಯಿಂದ ಇಂದು ಉಚಿತ ಆ್ಯಂಬುಲೆನ್ಸ್ ಸೇವೆ ಪ್ರಾರಂಭ ಮಾಡಲಾಯಿತು. ಆಮ್ಲಜನಕ ವ್ಯವಸ್ಥೆಯೂ ಇರುವ ಈ ಆಂಬುಲೆನ್ಸ್ ಅಗತ್ಯವಿರುವವರಿಗೆ ಶೀಘ್ರ ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಲಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.