

ನವದೆಹಲಿ: ಕೇಂದ್ರ ಗೃಹ ಸಚಿವಾಲಯವು 14 ಪ್ರವಾಹ ಪೀಡಿತ ರಾಜ್ಯಗಳಿಗೆ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್‌ಡಿಆರ್‌ಎಫ್) ಕೇಂದ್ರ ಸರ್ಕಾರ(Union Government)ದ ಪಾಲು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್‌ಡಿಆರ್‌ಎಫ್) ಮುಂಗಡವಾಗಿ 5,858.60 ಕೋಟಿ ರೂಪಾಯಿಗಳನ್ನು ಮಂಗಳವಾರ(ಅಕ್ಟೋಬರ್ 1) ಬಿಡುಗಡೆ ಮಾಡಿದೆ.
ಪ್ರವಾಹ ಪೀಡಿತ ರಾಜ್ಯಗಳಾದ ಅಸ್ಸಾಂ, ಮಿಜೋರಾಂ, ಕೇರಳ, ತ್ರಿಪುರಾ, ನಾಗಾಲ್ಯಾಂಡ್, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಣಿಪುರ ರಾಜ್ಯಗಳಿಗೆ ಸ್ಥಳದಲ್ಲೇ ಹಾನಿಯನ್ನು ನಿರ್ಣಯಿಸಲು ಅಂತರ-ಸಚಿವಾಲಯದ ಕೇಂದ್ರ ತಂಡಗಳನ್ನು (IMCT) ಕಳುಹಿಸಲಾಗಿದೆ. ಇತ್ತೀಚೆಗೆ ಪ್ರವಾಹದಿಂದ ಹಾನಿಗೊಳಗಾದ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಸ್ಥಳದಲ್ಲೇ ಹಾನಿಯ ಮೌಲ್ಯಮಾಪನ ಮಾಡಲು IMCT ಗಳನ್ನು ಕಳುಹಿಸಲಾಗುವುದು ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಐಎಂಸಿಟಿಯ ಮೌಲ್ಯಮಾಪನ ವರದಿಯನ್ನು ಪಡೆದ ನಂತರ ಪೀಡಿತ ರಾಜ್ಯಗಳಿಗೆ ಎನ್‌ಡಿಆರ್‌ಎಫ್‌ನಿಂದ ಹೆಚ್ಚುವರಿ ಆರ್ಥಿಕ ಸಹಾಯವನ್ನು ಮಂಜೂರು ಮಾಡಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಮಾರ್ಗದರ್ಶನದಲ್ಲಿ ಈ ವರ್ಷ 21 ರಾಜ್ಯಗಳಿಗೆ 14,958 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಎಸ್‌ಡಿಆರ್‌ಎಫ್‌ನಿಂದ 21 ರಾಜ್ಯಗಳಿಗೆ 9,044 ಕೋಟಿ ರೂಪಾಯಿ, ಎನ್‌ಡಿಆರ್‌ಎಫ್‌ನಿಂದ 15 ರಾಜ್ಯಗಳಿಗೆ 4528 ಕೋಟಿ ರೂಪಾಯಿ ಮತ್ತು ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿಯಿಂದ 11 ರಾಜ್ಯಗಳಿಗೆ 1385 ಕೋಟಿ ರೂಪಾಯಿ ಸೇರಿದೆ ಎಂದು ಸಚಿವಾಲಯ ತಿಳಿಸಿದೆ.
ಈ ವರ್ಷ ಮಾನ್ಸೂನ್ ಸಮಯದಲ್ಲಿ ಅತಿವೃಷ್ಟಿ, ಪ್ರವಾಹ ಮತ್ತು ಭೂಕುಸಿತದಿಂದ ಈ ರಾಜ್ಯಗಳು ಹಾನಿಗೊಳಗಾಗಿವೆ. ಹಣಕಾಸಿನ ನೆರವಿನ ಹೊರತಾಗಿ ಅಗತ್ಯವಿರುವ NDRF ಮತ್ತು ಸೇನಾ ತಂಡಗಳ ನಿಯೋಜನೆ ಮತ್ತು ವಾಯುಪಡೆಯ ಬೆಂಬಲ ಸೇರಿದಂತೆ ಎಲ್ಲಾ ಪ್ರವಾಹ ಪೀಡಿತ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಎಲ್ಲಾ ವ್ಯವಸ್ಥಾಪನಾ ಬೆಂಬಲವನ್ನು ಒದಗಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.(ಏಜೆನ್ಸೀಸ್)