

ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ರಾಜ್ಯದ ವಿಚಾರ. ನಮಗೂ ಕಾನೂನು ಗೊತ್ತಿದೆ. ಇದನ್ನು ಹೇಗೆ ಜಾರಿಗೆ ತರಬೇಕು ಎಂಬುದು ನಮಗೆ ಗೊತ್ತಿದೆ ಎಂದು DK ಶಿವಕುಮಾರ್ ಹೇಳಿದರು.
ದೆಹಲಿಯಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದರು. ಇಲ್ಲಿ ಒಂದಷ್ಟು ಸಚಿವರು ಇದ್ದಾರಲ್ಲ ಅವರುಗಳು ಕೇಂದ್ರ ಗೃಹ ಸಚಿವರಿಗೆ ಹೇಳಿ ಹೆಸರು ಬದಲಾವಣೆ ಬೇಡ ಎಂದು ಬರೆಸಿದ್ದಾರೆ ಎಂದರು. ಈ ವೇಳೆ ಕುಮಾರಸ್ವಾಮಿ ಅವರೇ ಎಂದು ಮರು ಪ್ರಶ್ನಿಸಿದಾಗ 'ಇನ್ನ್ಯಾರು' ಎಂದು ಹೆಸರು ಹೇಳದೆ ಛೇಡಿಸಿದರು.
ಈ ವಿಚಾರವಾಗಿ ಎಲ್ಲಾ ಇಲಾಖೆಗಳು ಧನಾತ್ಮಕವಾಗಿ ಸ್ಪಂದಿಸಿದ್ದವು. ಹಾಗೆ ನೋಡಿದರೆ ಇದರ ಅವಶ್ಯಕತೆಯೂ ಇಲ್ಲ ಎಂದರು.
"ನೀವು ಹೆಸರು ಬದಲಾವಣೆ ಮಾಡಿಕೊಳ್ಳುವಾಗ ಒಂದು ಅಫಿಡವಿಟ್ ಮಾಡಿಕೊಂಡು ಬದಲಾವಣೆ ಮಾಡಿಕೊಳ್ಳಬಹುದಂತೆ. ಇದು ರಾಜ್ಯದ ವಿಷಯ. ದ್ವೇಷದ ರಾಜಕಾರಣ ಹೇಗೆ ನಡೆಯುತ್ತಿದೆ ಹಾಗೂ ರಾಮನಗರ ಜನತೆಯ ಮೇಲೆ ನಡೆಸುತ್ತಿರುವ ಗದಾಪ್ರಹಾರಕ್ಕೆ ಇದೆಲ್ಲಾ ಸಾಕ್ಷಿ" ಎಂದು ವ್ಯಂಗ್ಯವಾಡಿದರು.
ನನ್ನ ಕೊಲೆಗೆ ಶಿವಕುಮಾರ್, ಸುರೇಶ್, ಹನುಮಂತರಾಯಪ್ಪ, ಕುಸುಮ ಸಂಚು ಹೂಡಿದ್ದಾರೆ ಎನ್ನುವ ಶಾಸಕ ಮುನಿರತ್ನ ಆರೋಪದ ಬಗ್ಗೆ ಕೇಳಿದಾಗ, "ದಿನಾ ಪೋಟೋ ಹಾಕಿಕೊಂಡು ನೋಡಿಕೊಳ್ಳಲು ಹೇಳಿ" ಎಂದು ಕುಟುಕಿದರು.