ಶಾಲಾ-ಕಾಲೇಜು ಪ್ರಾರಂಭಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ...

School
Published on

ನವದೆಹಲಿ: ಅನ್​ಲಾಕ್​-0.5 ಹಂತದಲ್ಲಿ ಶಾಲೆ-ಕಾಲೇಜು ಪ್ರಾರಂಭಕ್ಕೆ ಅವಕಾಶ ನೀಡಿರುವ ಕೇಂದ್ರ ಸರ್ಕಾರ ಅದರ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳಿಗೇ ಬಿಟ್ಟಿದೆ.

ಅಕ್ಟೋಬರ್​ 15ರ ನಂತರ ಶಾಲೆ ಪ್ರಾರಂಭಿಸಬಹುದು ಎಂದು ಹೇಳಿರುವ ಕೇಂದ್ರ ಸರ್ಕಾರ ಅದಕ್ಕೆ ಸಂಬಂಧಪಟ್ಟ ಮಾರ್ಗಸೂಚಿಯನ್ನು ಇಂದು ಬಿಡುಗಡೆ ಮಾಡಿದೆ.

ಇಂದು ಈ ಬಗ್ಗೆ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ, ಶಾಲೆ ಶುರು ಮಾಡುವ ಬಗ್ಗೆ ಆಯಾ ರಾಜ್ಯ, ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ಎಸ್​ಒಪಿ ತಯಾರಿಸಬೇಕು. ಅಲ್ಲಿನ ಪರಿಸ್ಥಿತಿಗನುಗುಣವಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.

ವಿದ್ಯಾರ್ಥಿಗಳು ಶಾಲೆಗೆ ಹೋಗುವ ಬಗ್ಗೆ ಸ್ವಯಂ ನಿರ್ಧಾರ ತೆಗೆದುಕೊಳ್ಳಬೇಕು. ಹಾಗೇ ಅವರ ಪಾಲಕರ ಲಿಖಿತ ಒಪ್ಪಿಗೆ ಇರಬೇಕು. ಅದರಲ್ಲೂ ಕಂಟೇನ್​ಮೆಂಟ್ ಝೋನ್​ಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳು, ಶಿಕ್ಷಕರಿಗೆ ಶಾಲೆಗೆ ಹಾಜರಾಗಲು ಅವಕಾಶ ಇಲ್ಲ. ವಿದ್ಯಾರ್ಥಿಗಳು ಆನ್​ಲೈನ್​ ಕಲಿಕೆಯನ್ನೂ ಆರಿಸಿಕೊಳ್ಳಬಹುದು. ಇದನ್ನೂ ಹಾಜರಾತಿಗೆ ಮಾನ್ಯ ಮಾಡಲಾಗುವುದು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಶಾಲಾ-ಕಾಲೇಜುಗಳಲ್ಲಿ ಕಾರ್ಯಪಡೆಗಳು ರಚನೆಯಾಗಬೇಕು. ತುರ್ತು ಆರೈಕೆ ತಂಡ, ಪ್ರತಿಕ್ರಿಯೆ/ಸಹಾಯ ನೀಡುವ ಫೋರ್ಸ್​, ಸ್ವಚ್ಛತಾ ತಂಡಗಳನ್ನು ರಚಿಸಿ ಜವಾಬ್ದಾರಿ ನೀಡಬೇಕು. ಮಕ್ಕಳು ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆಗೆ ಸೂಕ್ತ ಯೋಜನೆ ರೂಪಿಸಿಕೊಂಡು, ಸಾಮಾಜಿಕ ನಿಯಮ ಅಂತರ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಹಾಗೇ, ಸಾಧ್ಯವಾದರೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಪ್ರತ್ಯೇಕವಾಗಿಸಿ. ಅದರಲ್ಲೂ ಪ್ರತ್ಯೇಕ ಸಮಯವನ್ನು ಅಳವಡಿಸಿ ಎಂದೂ ಮಾರ್ಗಸೂಚಿಯಲ್ಲಿ ಸಲಹೆ ನೀಡಲಾಗಿದೆ.

ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಿ, ಮಕ್ಕಳಿಗೆ ಬಡಿಸುವಾಗ ತೀವ್ರ ಮುನ್ನೆಚ್ಚರಿಕೆ ವಹಿಸಬೇಕು. ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿಯ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್​ ಪಾಲನೆ ಮಾಡಬೇಕು.

ಶಾಲೆ ಶುರುವಾಗಿ 2-3 ವಾರದವರೆಗೂ ಯಾವುದೇ ಮೌಲ್ಯಮಾಪನ ಇರುವುದಿಲ್ಲ. ಐಸಿಟಿ (ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ) ಮತ್ತು ಆನ್​ಲೈನ್​ ಕಲಿಯನ್ನೇ ಪ್ರೋತ್ಸಾಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net