ನವದೆಹಲಿ: ನ್ಯಾಯಮೂರ್ತಿ ಎನ್.ಕೋಟೀಶ್ವರ್ ಸಿಂಗ್ ಮತ್ತು ನ್ಯಾಯಮೂರ್ತಿ ಆರ್.ಮಹದೇವನ್ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಕೇಂದ್ರ ಸರ್ಕಾರ ಮಂಗಳವಾರ (ಜುಲೈ 16) ಅಧಿಸೂಚನೆ ಹೊರಡಿಸಿದೆ. ಸುಪ್ರೀಂಕೋರ್ಟ್ ಕೊಲಿಜಿಯಂ ಜುಲೈ 11ರಂದು ಇಬ್ಬರು ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡಿತ್ತು.
ಇದನ್ನು ಓದಿ: ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ: ಸಿಬಿಐ, ಇಡಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ
ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಅವರು ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯಾಯಮೂರ್ತಿ ಮಹದೇವನ್ ಅವರು ಪ್ರಸ್ತುತ ಮದ್ರಾಸ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಸೇರಿದಂತೆ 34 ನ್ಯಾಯಮೂರ್ತಿಗಳಿದ್ದು, ಇಲ್ಲಿಯವರೆಗೆ ಎರಡು ಹುದ್ದೆಗಳು ಖಾಲಿಯಿದ್ದವು. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಸೂರ್ಯ ಕಾಂತ್ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ಕೊಲಿಜಿಯಂ ಅವರ ಹೆಸರನ್ನು ಸರ್ವಾನುಮತದಿಂದ ಶಿಫಾರಸು ಮಾಡಿದೆ.
ಮೂಲತಃ ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಅವರು ಮಣಿಪುರದವರಾಗಿದ್ದು, ಕೇಂದ್ರ ಸರ್ಕಾರ ಇವರ ನೇಮಕವನ್ನು ಅನುಮೋದಿಸಿದ ನಂತರ ಆ ರಾಜ್ಯದ ಮೊದಲ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಲಿದ್ದಾರೆ. 50 ವರ್ಷಗಳ ರಾಜ್ಯತ್ವದ ನಂತರ, ಮಣಿಪುರವು ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಾತಿನಿಧ್ಯವನ್ನು ಪಡೆದುಕೊಂಡಿದೆ. ನ್ಯಾಯಮೂರ್ತಿ ಸಿಂಗ್ ಅವರು 1963 ಮಾರ್ಚ್ 1 ರಂದು ಮಣಿಪುರದ ಇಂಫಾಲ್‌ನಲ್ಲಿ ಜನಿಸಿದರು. ಅವರ ತಂದೆಯ ಹೆಸರು (ದಿವಂಗತ) ನ್ಯಾಯಮೂರ್ತಿ ಎನ್.ಇಬೊಟೊಂಬಿ ಸಿಂಗ್, ಗುವಾಹಟಿ ಹೈಕೋರ್ಟ್‌ನ ಮೊದಲ ಅಡ್ವೊಕೇಟ್ ಜನರಲ್ ಮತ್ತು ಅವರ ತಾಯಿ ಎನ್.ಗೋಮತಿ ದೇವಿ. 2011ರಲ್ಲಿ ನ್ಯಾಯಮೂರ್ತಿ ಸಿಂಗ್ ಅವರು ಗುವಾಹಟಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು ಮತ್ತು 2012ರಲ್ಲಿ ಅವರನ್ನು ಕಾಯಂ ನ್ಯಾಯಾಧೀಶರನ್ನಾಗಿ ಮಾಡಲಾಯಿತು. ನ್ಯಾಯಮೂರ್ತಿ ಸಿಂಗ್ ಅವರು ಫೆಬ್ರವರಿ 2023 ರಿಂದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನ್ಯಾಯಮೂರ್ತಿ ಮಹದೇವನ್ ಅವರು ಮದ್ರಾಸ್ ಕಾನೂನು ಕಾಲೇಜಿನಲ್ಲಿ ತಮ್ಮ ಕಾನೂನು ಪದವಿಯನ್ನು ಪೂರ್ಣಗೊಳಿಸಿದರು. 1989ರಲ್ಲಿ ವಕೀಲರಾಗಿ ಸೇರಿಕೊಂಡರು. ಅವರು 2013ರಲ್ಲಿ ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಉನ್ನತೀಕರಿಸಲ್ಪಟ್ಟರು. (ಏಜೆನ್ಸೀಸ್)
ತಾಯಿ-ಮಗಳ ಸಜೀವ ದಹನ; ದುಷ್ಕ್ರತ್ಯಕ್ಕೆ ಕಾರಣರಾದ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು