

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್ಐ)ವನ್ನು ನಡೆಸಲು ತಾತ್ಕಾಲಿಕ ಸಮಿತಿಯೊಂದನ್ನು ರಚನೆ ಮಾಡುವಂತೆ ಕೇಂದ್ರ ಕ್ರೀಡಾ ಸಚಿವಾಲಯ, ಭಾರತೀಯ ಒಲಿಂಪಿಕ್ ಅಸೊಸಿಯೇಷನ್ (ಐಒಎ)ಗೆ ಕೇಳಿದೆ. ಕುಸ್ತಿಪಟುಗಳ ತೀವ್ರ ಅಸಮಾಧಾನದ ಬಳಿಕ ಹೊಸದಾಗಿ ಆಯ್ಕೆಯಾದ ಡಬ್ಲ್ಯುಎಫ್ಐ ಮ್ಯಾನೇಜ್ಮೆಂಟ್ ಅನ್ನು ಅಮಾನತು ಮಾಡಿದ ಬೆನ್ನಲ್ಲೇ ಸಚಿವಾಲಯ ಈ ಕ್ರಮ ಅನುಸರಿಸಿದೆ.
ಐಒಎ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ತಾತ್ಕಾಲಿಕ ಸಮಿತಿಯು ಕ್ರೀಡಾಪಟುಗಳ ಆಯ್ಕೆ ಸೇರಿದಂತೆ WFI ವ್ಯವಹಾರಗಳನ್ನು ನಿರ್ವಹಿಸಬಹುದು ಮತ್ತು ನಿಯಂತ್ರಿಸಬಹುದು ಎಂದು ಕ್ರೀಡಾ ಸಚಿವಾಲಯ ಹೇಳಿದೆ.
WFIನ ಮಾಜಿ ಪದಾಧಿಕಾರಿಗಳ ಪ್ರಭಾವ ಮತ್ತು ನಿಯಂತ್ರಣದಿಂದ ಉಂಟಾಗಿರುವ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಡಬ್ಲ್ಯುಎಫ್ಐನ ಆಡಳಿತ ಮತ್ತು ಸಮಗ್ರತೆಯ ಬಗ್ಗೆ ಗಂಭೀರ ಕಳವಳಗಳು ಉದ್ಭವಿಸಿವೆ. ಆದ್ದರಿಂದ ಕ್ರೀಡಾ ಸಂಸ್ಥೆಗಳಲ್ಲಿ ಉತ್ತಮ ಆಡಳಿತದ ತತ್ವಗಳನ್ನು ಎತ್ತಿಹಿಡಿಯಲು ತಕ್ಷಣಕ್ಕೆ ಕಟ್ಟುನಿಟ್ಟಾದ ಸರಿಪಡಿಸುವ ಕ್ರಮಗಳ ಅಗತ್ಯವಿದೆ. ಹೀಗಾಗಿ WFIನ ವ್ಯವಹಾರಗಳನ್ನು ನಿರ್ವಹಿಸಲು ಮಧ್ಯಂತರ ಅವಧಿಗೆ ಸೂಕ್ತವಾದ ವ್ಯವಸ್ಥೆಗಳನ್ನು ಮಾಡಲು ಐಒಎಗೆ ಅಧಿಕಾರ ನೀಡಲಾಗಿದೆ. ಕುಸ್ತಿಯ ಶಿಸ್ತಿನ ಕ್ರೀಡಾಪಟುಗಳು ಯಾವುದೇ ರೀತಿಯಲ್ಲಿ ತೊಂದರೆ ಅನುಭವಿಸುವುದಿಲ್ಲ. ಉತ್ತಮ ಆಡಳಿತದ ತತ್ವವೆಂದರೆ ಕ್ರೀಡಾ ಸಂಸ್ಥೆಯು ಅಪಾಯಕ್ಕೆ ಒಳಗಾಗಬಾರದು ಎಂದು ಕ್ರೀಡಾ ಸಚಿವಾಲಯ ಪತ್ರದಲ್ಲಿ ತಿಳಿಸಿದೆ.
WFIನ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಈ ವರ್ಷದ ಜನವರಿಯಲ್ಲಿ ಕುಸ್ತಿಪಟುಗಳು ಜಂತರ್ ಮಂತರ್ನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಹಲವಾರು ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಮತ್ತು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು. ಸರ್ಕಾರ ತನಿಖೆಗೆ ಆದೇಶಿಸಿದ ಬಳಿಕ ಪ್ರತಿಭಟನೆಯನ್ನು ಕೈಬಿಟ್ಟರು. ಚುನಾವಣೆಯಲ್ಲಿ ಬ್ರಿಜ್ ಕುಟುಂಬದ ಸದಸ್ಯರಿಗಾಗಲಿ, ಸಹಾಯಕರಿಗಾಗಲಿ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಲಾಗಿತ್ತು.
ಆದರೆ, ಡಿ.21ರಂದು ನಡೆದ ಡಬ್ಲ್ಯುಎಫ್ಐ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಬಹುಕಾಲದ ಆಪ್ತ ಸಂಜಯ್ ಸಿಂಗ್, ನೂತನ ಮುಖ್ಯಸ್ಥರಾಗಿ ಆಯ್ಕೆಯಾದರು. ಸಂಜಯ್ ಸಿಂಗ್ 47 ರಲ್ಲಿ 40 ಮತಗಳನ್ನು ಗಳಿಸಿ ವಿಜಯಶಾಲಿಯಾದರೆ, ಅವರ ವಿರುದ್ಧ ಸ್ಪರ್ಧಿಸಿದ್ದ ಕಾಮನ್ವೆಲ್ತ್ ಗೇಮ್ಸ್ನ ಚಿನ್ನದ ಪದಕ ವಿಜೇತೆ ಅನಿತಾ ಶೆರಾನ್ ಕೇವಲ 7 ಮತಗಳನ್ನು ಮಾತ್ರ ಗಳಿಸಿದರು. ಚುನಾವಣೆ ಬೆನ್ನಲ್ಲೇ ಕುಸ್ತಿಪಟುಗಳು ತೀವ್ರ ಆಕ್ರೋಶ ಹೊರಹಾಕಿದರು. ಸರ್ಕಾರ ನಮಗೆ ಕೊಟ್ಟ ಭರವಸೆ ಎಲ್ಲ ಹುಸಿಯಾಗಿದೆ ಎಂದು ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲ್ಲಿಕ್, ಬಜರಂಗ್ ಪೂನಿಯಾ ಮತ್ತು ವಿನೇಶ್ ಫೋಗಟ್ ಸೇರಿದಂತೆ ಎಲ್ಲ ಕುಸ್ತಿಪಟುಗಳು ಬೇಸರ ಹೊರಹಾಕಿದರು.
ಇದಿಷ್ಟೇ ಅಲ್ಲದೆ, ಸಾಕ್ಷಿ ಮಲ್ಲಿಕ್ ಕ್ರೀಡೆಯನ್ನೇ ತೊರೆಯುವುದಾಗಿ ಘೋಷಿಸಿದರು. ಸಾಕ್ಷಿ ಬೆನ್ನಿಗೆ ಬಜರಂಗ್ ಪೂನಿಯ ತಮಗೆ ಸಿಕ್ಕ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಮಾಡುವುದಾಗಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದರು. ಈ ಬೆಳವಣಿಗೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕೇಂದ್ರ ಕ್ರೀಡಾ ಸಚಿವಾಲಯ ಹೊಸದಾಗಿ ಆಯ್ಕೆಯಾದ WFI ಮ್ಯಾನೇಜ್ಮೆಂಟ್ ಅನ್ನು ರದ್ದು ಮಾಡಿದೆ. ಈ ಮೂಲಕ ವಿವಾದಕ್ಕೆ ತೆರೆಎಳೆದಿದೆ. ಮುಂದಿನ ಚುನಾವಣೆ ನಡೆಯುವವರೆಗೂ ತಾತ್ಕಾಲಿಕ ಸಮಿತಿ ರಚನೆ ಮಾಡುವಂತೆ ಐಒಎಗೆ ತಿಳಿಸಿದೆ. (ಏಜೆನ್ಸೀಸ್)